ತಮ್ಮ ಪರಿಚಿತ ಯುವತಿಗೆ ಬಲವಂತದಿಂದ ಮದ್ಯ ಕುಡಿಸಿ ರೇಪ್‌: ಬಿಜೆಪಿ ಮುಖಂಡನ ಮೇಲೆ ಕೇಸ್‌

| Published : Jan 08 2025, 01:31 AM IST / Updated: Jan 08 2025, 04:23 AM IST

rape of a girl child

ಸಾರಾಂಶ

ತಮ್ಮ ಪರಿಚಿತ ಯುವತಿಗೆ ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಹಾಸನ ಜಿಲ್ಲೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಮೇಲೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು:  ತಮ್ಮ ಪರಿಚಿತ ಯುವತಿಗೆ ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಹಾಸನ ಜಿಲ್ಲೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಮೇಲೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರದ ನಿವಾಸಿ ಸೋಮಶೇಖರ್ ಅಲಿಯಾಸ್ ಜಿಮ್ ಸೋಮ ಮೇಲೆ ಆರೋಪ ಕೇಳಿ ಬಂದಿದ್ದು, ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಅಶೋಕನಗರ ಸಮೀಪದ ಹೋಟೆಲ್‌ಗೆ ಸಂತ್ರಸ್ತೆಯನ್ನು ಮಾತುಕತೆ ನೆಪದಲ್ಲಿ ಕರೆಸಿ ಸೋಮ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಹಲವು ದಿನಗಳ ಹಿಂದೆ ತನ್ನ ಸ್ನೇಹಿತೆ ಮೂಲಕ ಜಿಮ್ ಸೋಮನಿಗೆ ಸಂತ್ರಸ್ತೆ ಪರಿಚಯವಾಗಿದ್ದಳು. ಈ ಸ್ನೇಹದಲ್ಲಿ ತನ್ನ ಮದುವೆಗೆ ಸುಮಾರು 6 ಲಕ್ಷ ರು. ಸಾಲ ಕೇಳಲು ಸೋಮನನ್ನು ಭೇಟಿಯಾಗಿದ್ದಳು. ಆಗ ಮದುವೆಗೆ ಸಹಾಯ ಮಾಡುವುದಾಗಿ ಹೇಳಿ ಯುವತಿ ಜತೆ ಆತ ಸಲುಗೆ ಬೆಳೆಸಿದ್ದಾನೆ. ನಂತರ ಕೆಲ ದಿನಗಳ ಹಿಂದೆ ಅಶೋಕನಗರ ಸಮೀಪದ ಹೋಟೆಲ್‌ಗೆ ಮಾತುಕತೆ ನೆಪದಲ್ಲಿ ಕರೆಸಿದ್ದಾನೆ. ಈ ಆಹ್ವಾನದ ಮೇರೆಗೆ ಹೋಟೆಲ್‌ಗೆ ತೆರಳಿ ಸಂತ್ರಸ್ತೆಗೆ ಬಲವಂತವಾಗಿ ಮದ್ಯ ಕುಡಿಸಿ ಜಿಮ್ ಸೋಮ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ ಎನ್ನಲಾಗಿದೆ.

ಮೈತ್ರಿ ಸರ್ಕಾರ ಸಂಚು ರೂಪಿಸಿದ್ದ ಜಿಮ್ ಸೋಮ :  ಬಡ್ಡಿ ಹಾಗೂ ರಿಯಲ್‌ ಎಸ್ಟೇಟ್ ಸೇರಿದಂತೆ ಇತರೆ ವ್ಯವಹಾರಗಳಲ್ಲಿ ತೊಡಗಿದ್ದ ಜಿಮ್ ಸೋಮ, ರಾಜಕೀಯದಲ್ಲೂ ಸಕ್ರಿಯವಾಗಿದ್ದ. 2018ರಲ್ಲಿ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳಿಂದ ಆತ ಪರಾಜಿತನಾಗಿದ್ದ. ಅಲ್ಲದೆ 2019ರಲ್ಲಿ ಅಂದಿನ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಂಚು ರೂಪಿಸಿದ್ದ ಆರೋಪಕ್ಕೆ ಜಿಮ್ ಸೋಮ ತುತ್ತಾಗಿದ್ದ. ಆಗ ರಾಜಕೀಯ ವಲಯದಲ್ಲಿ ಆತನ ಹೆಸರು ಭಾರೀ ಚರ್ಚೆಗೆ ಬಂದಿತ್ತು. ಇದಾದ ನಂತರ ನೇಪಥ್ಯಕ್ಕೆ ಸೇರಿದ್ದ ಜಿಮ್ ಸೋಮ ಮತ್ತೆ ಅತ್ಯಾಚಾರ ಆರೋಪ ಹೊತ್ತು ಸದ್ದು ಮಾಡಿದ್ದಾನೆ.