ಸಾರಾಂಶ
: ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ ಮಾಡಿರುವ ಮನಕಲಕುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೀಣ್ಯ ದಾಸರಹಳ್ಳಿ : ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ ಮಾಡಿರುವ ಮನಕಲಕುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಪೋಕ್ಸೋ ಕೇಸ್ ದಾಖಲಿಸಿ ಸದ್ಯ ಪೊಲೀಸರು ಬಂಧಿಸಿದ್ದಾರೆ.
ಹಾಡಹಗಲೇ 17 ವರ್ಷದ ಬಾಲಕಿ ಮೇಲೆ ದುರುಳ ಅತ್ಯಾಚಾರ ಮಾಡಿದ್ದಾನೆ. ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ರವಿಕುಮಾರ್(39) ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ ₹70 ಸಾವಿರ ಪಡೆದಿದ್ದರು. ಈ ಹಿಂದೆ ₹30 ಸಾವಿರ ಸಾಲ ಕೂಡ ತೀರಿಸಿದ್ದರು. ಇನ್ನುಳಿದ ₹40 ಸಾವಿರ ಜೊತೆಗೆ ಬಡ್ಡಿ ಹಣ ನೀಡುವಂತೆ ರವಿಕುಮಾರ್ ಸಂತ್ರಸ್ತ ಬಾಲಕಿಯ ತಂದೆಯನ್ನು ಪೀಡಿಸುತ್ತಿದ್ದ.
ಈ ಹಿಂದೆ ಬಲವಂತವಾಗಿ ಬಾಲಕಿಗೆ ರವಿಕುಮಾರ್ ಮುತ್ತು ಕೊಟ್ಟಿದ್ದ. ಈ ದೃಶ್ಯವನ್ನು ಫೋಟೋ ಕೂಡ ತೆಗೆದುಕೊಂಡಿದ್ದ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಸಂತ್ರಸ್ತೆ ಬಾಗಲಗುಂಟೆ ಠಾಣೆಗೆ ದೂರು ನೀಡಲು ಮುಂದಾಗಿದ್ದಳು. ಆದರೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ರವಿಕುಮಾರ್ನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.
ಏನಿದು ಕೇಸ್?
- ವ್ಯಕ್ತಿಯೊಬ್ಬರು ರವಿಕುಮಾರ್ ಎಂಬಾತನ ಬಳಿ 70 ಸಾವಿರ ರು. ಸಾಲ ಪಡೆದಿದ್ದರು
- 30 ಸಾವಿರ ರು. ಸಾಲ ತೀರಿಸಿದ್ದರು. 40 ಸಾವಿರ ರು. ಸಾಲ, ಬಡ್ಡಿ ಹಣ ಕಟ್ಟಬೇಕಿತ್ತು
- ಆ ವ್ಯಕ್ತಿಯ ಪುತ್ರಿಗೆ ಈ ಹಿಂದೆ ಬಲವಂತವಾಗಿ ಮುತ್ತು ನೀಡಿದ್ದ ರವಿಕುಮಾರ್
- ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
- ದೂರು ದಾಖಲು. ಮಾದನಾಯಕನಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ