ಸಾರಾಂಶ
ಬೆಂಗಳೂರು : ಇತ್ತೀಚೆಗೆ ಹಣಕ್ಕಾಗಿ ಮನೆಯೊಡತಿಯನ್ನು ದಾರದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಬಾಡಿಗೆದಾರ ಮಹಿಳೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋನಸಂದ್ರದ ನಿವಾಸಿ ಮೋನಿಕಾ ಬಂಧಿತಳಾಗಿದ್ದು, ಕೆಲ ದಿನಗಳ ಹಿಂದೆ ಮನೆ ಮಾಲಕಿ ದಿವ್ಯಾಳನ್ನು ಕಸ್ತು ಹಿಸುಕಿ ಕೊಂದು ಚಿನ್ನದ ಸರ ದೋಚಿದ್ದಳು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮೋನಿಕಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮೋನಿಕಾ, ಎರಡು ತಿಂಗಳಿಂದ ದಿವ್ಯಾ ಅವರ ಕೋನಸಂದ್ರ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದಳು. ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯದಿಂದ ಆಕೆಯ ಪತಿ ಮೃತಪಟ್ಟಿದ್ದರು. ಬಳಿಕ ನಗರದಲ್ಲಿ ಮಂಗಳೂರಿನ ಯುವಕನ ಜತೆ ಆಕೆ ಲಿವಿಂಗ್ ಟುಗೆದರ್‌ನಲ್ಲಿ ವಾಸವಾಗಿದ್ದಳು. ಬ್ಯುಸಿನೆಸ್ ನಡೆಸುವ ಸಲುವಾಗಿ ತನ್ನ ಸ್ನೇಹಿತರಿಂದ ಏಳೆಂಟು ಲಕ್ಷ ರುಪಾಯಿ ಸಾಲ ಮಾಡಿಕೊಂಡು ಆಕೆ ಸಂಕಷ್ಟಕ್ಕೆ ತುತ್ತಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಸಕಾಲಕ್ಕೆ ಹಣ ತೀರಿಸಲಾಗದೆ ಮೋನಿಕಾಳಿಗೆ ಸಾಲಗಾರರ ಕಾಟ ವಿಪರೀತವಾಗಿತ್ತು. ಏನೇನೋ ಬ್ಯುಸಿನೆಸ್ ನಡೆಸಲು ಹೋಗಿ ಆಕೆ ಕೈ ಸುಟ್ಟುಕೊಂಡಿದ್ದಳು. ಈ ಹಣಕಾಸು ಸಮಸ್ಯೆಯಿಂದ ಕಂಗಲಾದ ಆಕೆ, ತನ್ನ ಮನೆ ಮಾಲಕಿ ಏಕಾಂಗಿಯಾಗಿದ್ದಾಗ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಳು. ಇನ್ನು ಅದೇ ಮನೆ ಕಟ್ಟಡದ ಮೊದಲ ಮಹಡಿಯಲ್ಲಿ ದಿವ್ಯಾ ಕುಟುಂಬ ವಾಸವಾಗಿತ್ತು. ಕೋನಸಂದ್ರ ಸಮೀಪ ಸಲೂನ್ ಅನ್ನು ಮೃತರ ಪತಿ ಗುರುಮೂರ್ತಿ ನಡೆಸುತ್ತಿದ್ದಾರೆ.
ಕಷ್ಟ ಹೇಳಲು ಹೋಗಿ ಕೊಂದಳು:
ಮೇ 10ರಂದು ಮಧ್ಯಾಹ್ನ ಪತಿ ಸಲೂನ್‌ಗೆ ತೆರಳಿದ ಬಳಿಕ ಮಗು ಜತೆ ಮನೆಯಲ್ಲಿ ದಿವ್ಯಾ ಏಕಾಂಗಿಯಾಗಿದ್ದರು. ಆ ವೇಳೆ ತನ್ನ ಕಷ್ಟ ಹೇಳಿಕೊಳ್ಳುವ ಸೋಗಿನಲ್ಲಿ ಆಕೆಯ ಮನೆಗೆ ಮೋನಿಕಾ ಹೋಗಿದ್ದಳು. ಆಗ ‘ನನಗೆ ತುಂಬಾ ಕಷ್ಟ ಕಣಕ್ಕ, ದುಡ್ಡಿಗೆ ತುಂಬಾ ತಾಪತ್ರಯ’ ಎಂದಿದ್ದಾಳೆ. ಈ ಮಾತಿಗೆ ‘ಎಲ್ಲರಿಗೂ ಕಷ್ಟ ಬರುತ್ತದೆ ಬಿಡು’ ಎಂದು ದಿವ್ಯಾ ಸಮಾಧಾನ ಮಾಡಿದ್ದಳು. ಆಗ ದಿವ್ಯಾಳ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದು ಆಕೆ ಧರಿಸಿ 30 ಗ್ರಾಂ ಚಿನ್ನದ ಸರ ದೋಚಿ ಮೋನಿಕಾ ಪರಾರಿಯಾಗಿದ್ದಳು.
ಇತ್ತ ತನ್ನ ಪತ್ನಿ ಮಧ್ಯಾಹ್ನ ಕರೆ ಸ್ವೀಕರಿಸದೆ ಹೋದಾಗ ಆತಂಕಗೊಂಡ ಗುರುಮೂರ್ತಿ, ಕೂಡಲೇ ಮನೆಗೆ ಮರಳಿದಾಗ ಪ್ರಜ್ಞಾಹೀನಾಳಾಗಿ ಬಿದ್ದಿದ್ದ ಪತ್ನಿ ಕಂಡು ಆಘಾತಗೊಂಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು. ಈ ಹತ್ಯೆ ಕೃತ್ಯ ಎಸಗಿದ ಬಳಿಕ ಮೋನಿಕಾ, ಮನೆ ಸಮೀಪದ ಗಿರವಿ ಅಂಗಡಿಗೆ ತೆರಳಿ ಚಿನ್ನದ ಸರ ಅಡಮಾನವಿಟ್ಟು ಒಂದು ಲಕ್ಷ ರು. ಪಡೆದು ಮನೆಗೆ ಮರಳಿದ್ದಳು. ಆ ಮನೆ ಮುಂದೆ ಪೊಲೀಸರನ್ನು ಕಂಡು ತನ್ನ ಮೇಲೆ ಅನುಮಾನ ಬಾರದಂತೆ ಮೃತದೇಹ ಮುಂದೆ ಆಕೆಯೂ ಕಣ್ಣೀರು ಸುರಿಸಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹತ್ಯೆ ಕೃತ್ಯದ ತನಿಖೆಗಿಳಿದ ಪೊಲೀಸರಿಗೆ ಮೃತಳ ಮನೆಗೆ ಆರೋಪಿ ಬಲವಂತದಿಂದ ಪ್ರವೇಶಿಸಿಲ್ಲದ ಕಾರಣ ಪರಿಚಿಯಸ್ಥರ ಪಾಲ್ಗೊಂಡಿರುವುದು ಖಚಿತವಾಯಿತು. ಈ ಸುಳಿವು ಮೇರೆಗೆ ಮೃತರ ಸ್ನೇಹಿತರು ಹಾಗೂ ಸಂಬಂಧಿಕರ ವಿಚಾರಣೆ ನಡೆಸಿದರೂ ಮಾಹಿತಿ ಸಿಕ್ಕಿಲ್ಲ. ಕೊನೆಗೆ ಮೋನಿಕಾಳ ನಡವಳಿಕೆ ಮೇಲೆ ಶಂಕೆಗೊಂಡ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.
ರೀಲ್ಸ್ ಸ್ಟಾರ್ ಮೋನಿಕಾ
ಮೋಜು ಮಸ್ತಿ ನಡೆಸುತ್ತಿದ್ದ ಮೋನಿಕಾ, ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಮೂಲಕ ಗಮನ ಸೆಳೆದಿದ್ದಳು. ಈ ಶೋಕಿಗೆ ಆಕೆ ಹಣ ವ್ಯಯಿಸಿದ್ದಳು. ನಾಲ್ಕು ವರ್ಷದ ಹಿಂದೆ ಮದುವೆಯಾದ ನಾಲ್ಕು ತಿಂಗಳಿಗೆ ಮೋನಿಕಾಳ ಪತಿ ಮೃತಪಟ್ಟಿದ್ದ. ಆನಂತರ ತನ್ನೂರು ತೊರೆದು ನಗರಕ್ಕೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಆಕೆ ಸೇರಿದ್ದಳು. ಆಗ ಮಂಗಳೂರಿನ ಯುವಕನ ಪರಿಚಯವಾಗಿ ತರುವಾಯ ಇಬ್ಬರು ಸಹಬಾಳ್ವೆ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟಿವಿ ಮುಂದೆ ಮಗು ಕೂರಿಸಿ ತಾಯಿ ಹತ್ಯೆ
ಮನೆಯಲ್ಲಿ ತನ್ನ ಮೂರು ವರ್ಷದ ಮಗು ಜತೆ ದಿವ್ಯಾ ಇದ್ದರು. ಆಗ ಮನೆ ಮಾಲೀಕರ ಮನೆಗೆ ಹೋದ ಮೋನಿಕಾ, ದಿವ್ಯಾ ಮಗುವನ್ನು ಆಟವಾಡಿಸುವ ನೆಪದಲ್ಲಿ ತನ್ನ ಮನೆಗೆ ಕರೆತಂದಿದ್ದಳು. ಬಳಿಕ ಟೀವಿಯಲ್ಲಿ ಕಾರ್ಟೋನ್ ಚಾನೆಲ್ ಹಾಕಿ ಮಗುವನ್ನು ಕೂರಿಸಿ ಮತ್ತೆ ದಿವ್ಯಾ ಮನೆಗೆ ತೆರಳಿದ ಆಕೆ, ಪೂರ್ವಯೋಜಿತ ಸಂಚಿನಂತೆ ದಾರದಿಂದ ಕುತ್ತಿಗೆ ಬಿಗಿದು ದಿವ್ಯಾಳನ್ನು ಹತ್ಯೆ ಮಾಡಿದ್ದಳು ಎಂದು ಮೂಲಗಳು ತಿಳಿಸಿವೆ.