ನಟ ದರ್ಶನ್‌ ಪ್ರಮುಖ ಆರೋಪಿ ಆಗಿರುವ ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಅವರು ಗಾಬರಿ ಆಗಿ ಸಮರ್ಪಕವಾಗಿ ಹೇಳಿಕೆ ದಾಖಲಿಸದ ಪ್ರಸಂಗ ಮಂಗಳವಾರ ನಡೆಯಿತು.

ಬೆಂಗಳೂರು : ನಟ ದರ್ಶನ್‌ ಪ್ರಮುಖ ಆರೋಪಿ ಆಗಿರುವ ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಅವರು ಗಾಬರಿ ಆಗಿ ಸಮರ್ಪಕವಾಗಿ ಹೇಳಿಕೆ ದಾಖಲಿಸದ ಪ್ರಸಂಗ ಮಂಗಳವಾರ ನಡೆಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಮುಂದುವರಿಸಿತು. ಪ್ರಕರಣ ಸಂಬಂಧ ಅ.98ರಂದು ನ್ಯಾಯಾಲಯದ ನೀಡಿದ್ದ ನಿರ್ದೇಶದದಂತೆ ನಟರಾದ ಚಿಕ್ಕಣ್ಣ ಮತ್ತು ಯಶಸ್‌ ಸೂರ್ಯ (ಆರ್.ನವೀನ್‌) ಸಾಕ್ಷ್ಯ ನುಡಿಯಲು (ಹೇಳಿಕೆ ದಾಖಲಿಸಲು) ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು.

15 ನಿಮಿಷ ಮುಂದೂಡಿಕೆ:

ಮೊದಲಿಗೆ ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲಿಸಿಕೊಳ್ಳಲು ನ್ಯಾಯಾಲಯ ಮುಂದಾಯಿತು. ಆದರೆ, ಈ ವೇಳೆ ಚಿಕ್ಕಣ್ಣ ಗಾಬರಿಗೆ ಒಳಗಾದರು. ಸರಿಯಾಗಿ ಹೇಳಿಕೆ ದಾಖಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರು, ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಚಿಕ್ಕಣ್ಣಗೆ ಸೂಚಿಸಿ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು 15 ನಿಮಿಷ ಕಾಲ ಮುಂದೂಡಿದರು.

ಅದಾದ 15 ನಿಮಿಷ ನಂತರ ಸಾಕ್ಷ್ಯ ದಾಖಲಿಸಲು ಮತ್ತೆ ಚಿಕ್ಕಣ್ಣ ಅವರನ್ನು ಕರೆಯಲಾಯಿತು. ಆಗಲೂ ಸಹ ಅವರು ಗಾಬರಿಗೆ ಒಳಗಾದರು. ಅದನ್ನು ಪರಿಗಣಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ (ಎಸ್‌ಪಿಪಿ) ಪಿ.ಪ್ರಸನ್ನ ಕುಮಾರ್‌ ಅವರು, ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡುವಂತೆ ಕೋರಿದರು. ಆ ಮನವಿ ಮನ್ನಿಸಿದ ನ್ಯಾಯಾಧೀಶರು, ಚಿಕ್ಕಣ್ಣ ಅವರ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡಿದರು.

ಪವನ್‌ ಬಂದು ಹೋದ ಬಗ್ಗೆ ಗೊತ್ತಿಲ್ಲ:

ನಂತರ ನಟ ಯಶಸ್‌ ಸೂರ್ಯ ಅವರನ್ನು ಸಾಕ್ಷ್ಯ ದಾಖಲಾತಿಗೆ ಕರೆಯಲಾಯಿತು. ಅವರು ದರ್ಶನ್‌ ಜತೆಗಿನ ಪರಿಚಯ, ನಟನೆ ಮಾಡಿದ ಚಿತ್ರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ರೇಣುಕಾಸ್ವಾಮಿ ಕೊಲೆ ನಡೆದ ದಿನವಾದ 2024ರ ಜೂ.8ರಂದು ಮಧ್ಯಾಹ್ನ 1 ಗಂಟೆಗೆ ದರ್ಶನ್‌ ಸೂಚನೆ ಮೇರೆಗೆ ಊಟ ಮಾಡಲು ರಾಜೇಶ್ವರಿ ನಗರದ ಸ್ಟೋನಿಬ್ರೂಕ್ಸ್‌ ಪಬ್‌ಗೆ ಹೋಗಿದ್ದೆ. ಅಲ್ಲಿಗೆ ದರ್ಶನ್‌ ಬಂದಿದ್ದು, ಊಟ ಮಾಡಿದ ಬಳಿಕ ನಾನು ನನ್ನ ಪಾಡಿಗೆ ಮನೆಗೆ ಬಂದೆ. ಆದರೆ, ಈ ವೇಳೆ ಪಬ್‌ಗೆ ದರ್ಶನ್‌ ಮನೆಯಲ್ಲಿ ಕೆಲಸ ಮಾಡುವ ಪವನ್‌ ಬಂದು ಹೋದ ಬಗ್ಗೆ ನನಗೆ ಗೊತ್ತಿಲ್ಲ. ಪವನ್‌ ಬಂದು ಹೋದ ಎಂದು ಪೊಲೀಸರು ಹೇಳಿದ್ದಕ್ಕೆ ನಾನು ಹೇಳಿದೆ ಎಂದು ನುಡಿದರು.

ಅದಕ್ಕೆ ಆಕ್ಷೇಪಿಸಿದ ಎಸ್‌ಪಿಪಿ, ಯಶಸ್‌ ಸೂರ್ಯನನ್ನು ಭಾಗಶಃ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿ ಪಾಟಿ ಸವಾಲು ನಡೆಸಲು ತಮಗೆ ಅನುಮತಿ ನೀಡಬೇಕು ಎಂದು ಕೋರಿದರು. ಆ ಮನವಿ ಪುರಸ್ಕರಿಸಿದ ನ್ಯಾಯಾಲಯ, ಯಶಸ್‌ ಸೂರ್ಯ ಅನ್ನು ಪಾಟಿ ಸವಾಲಿಗೆ ಒಳಪಡಿಸಲು ಎಸ್‌ಪಿಪಿಗೆ ಅನುಮತಿ ನೀಡಿತು. ಇನ್ನು ನ್ಯಾಯಾಲಯ ಆದೇಶದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಈ ಕುರಿತು ನ್ಯಾಯಾಂಗ ಪರಿಶೀಲನೆಗೆ ಆದೇಶಿಸಬೇಕು ಎಂದು ನ್ಯಾಯಾಧೀಶರನ್ನು ಪ್ರಕರಣದ ಮೊದಲನೆ ಆರೋಪಿ ಪವಿತ್ರಾ ಗೌಡ ಕೋರಿದರು.

ಅದಕ್ಕೆ ಎಸ್‌ಪಿಪಿ, ಈ ಕುರಿತು ಪರಿಶೀಲನೆ ನಡೆಸಿ ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಅಂತಿಮವಾಗಿ ನ್ಯಾಯಾಯವು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.