ಸಾರಾಂಶ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ನಟ ದರ್ಶನ್ ಹಾಗೂ ಅವರ ಸಹಚರರಿಗೆ ಡಿಎನ್‌ಎ ಪರೀಕ್ಷೆಯೇ ಬಹುಮುಖ್ಯ ವೈಜ್ಞಾನಿಕ ಸಾಕ್ಷ್ಯವಾಗುವ ಮೂಲಕ ಕಂಟಕವಾಗಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ಮನೆಯಲ್ಲಿ ಬಟ್ಟೆ, ಶೂ, ಪವಿತ್ರಾಗೌಡಳ ಮನೆಯಲ್ಲಿ ಬಟ್ಟೆಗಳು, ಚಪ್ಪಲಿ ಹಾಗೂ ಇತರೆ ಆರೋಪಿಗಳಿಂದ ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ಬಟ್ಟೆ ಹಾಗೂ ಶೂಗಳಲ್ಲಿ ಅಂಟಿದ್ದ ರಕ್ತದ ಕಲೆಗೂ ರೇಣುಕಾಸ್ವಾಮಿ ರಕ್ತಕ್ಕೂ ಸಾಮ್ಯತೆ ಪತ್ತೆ ಹಚ್ಚಲು ಪೊಲೀಸರು ದರ್ಶನ್ ಗ್ಯಾಂಗ್ ಅನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದರು. ಈ ಬಗ್ಗೆ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯಲ್ಲಿ ರೇಣುಕಾಸ್ವಾಮಿ ರಕ್ತಕ್ಕೂ ಆರೋಪಿಗಳ ಬಟ್ಟೆಗಳ ಮೇಲಿದ್ದ ರಕ್ತಕ್ಕೂ ಸಾಮ್ಯತೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಲೂಮಿನಾರ್ ಪರೀಕ್ಷೆ ಮೂಲಕ ಮಾಹಿತಿ ಸಂಗ್ರಹ:
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಗೈದ ಬಳಿಕ ಅಳಿಸಿ ಹಾಕಿದ್ದ ರಕ್ತದ ಕಲೆಗಳು ಸೇರಿದಂತೆ ಇತರೆ ಪುರಾವೆಗಳ ಸಂಗ್ರಹಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್‌ಎಲ್) ತಜ್ಞರ ಸಹಕಾರದಲ್ಲಿ ಪೊಲೀಸರು ಲೂಮಿನಾರ್ ಪರೀಕ್ಷೆ ನಡೆಸಿದ್ದರು. ಮೃತದೇಹ ಸಾಗಾಣಿಕೆಗೆ ಬಳಸಿದ್ದ ಸ್ಕಾರ್ಪಿಯೋ ಕಾರು ಹಾಗೂ ಶೆಡ್‌ನಲ್ಲಿ ಮೃತನ ಮೇಲೆ ಹಲ್ಲೆ ನಡೆಸಲು ಬಳಸಿದ್ದ ದೊಣ್ಣೆಗಳಲ್ಲಿ ಅಂಟಿದ್ದ ರಕ್ತ ಕಲೆಗಳನ್ನು ಎಫ್‌ಎಸ್‌ಎಲ್ ತಜ್ಞರು ಸಂಗ್ರಹಿಸಿದ್ದರು. ನಂತರ ಪಟ್ಟಣಗೆರೆ ಶೆಡ್‌ನಲ್ಲಿ ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದ ಸ್ಥಳದಲ್ಲಿ ಸಂಗ್ರಹಿಸಲಾದ ವಸ್ತುಗಳಿಗೆ ಹೋಲಿಕೆ ಮಾಡಿ ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.
ದರ್ಶನ್ ಪತ್ನಿ ಸಹ ಸಾಕ್ಷ್ಯ ಹೇಳಿಕೆ?: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಹ ಸಾಕ್ಷಿಯಾಗಿ ಪೊಲೀಸರು ಪರಿಗಣಿಸಿದ್ದಾರೆ ಎನ್ನಲಾಗಿದೆ. ಹೊಸಕೆರೆಹಳ್ಳಿ ಸಮೀಪ ವಿಜಯಲಕ್ಷ್ಮೀ ಅವರು ನೆಲೆಸಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲೇ ರೇಣುಕಾಸ್ವಾಮಿ ಹತ್ಯೆ ಕೃತ್ಯದ ವೇಳೆ ದರ್ಶನ್ ಧರಿಸಿದ್ದ ಶೂಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ಅವರನ್ನು ವಿಚಾರಣೆ ನಡೆಸಿ ಪಡೆದಿದ್ದ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಅಳಿಸಿ ಹಾಕಿದ್ದ ಸಂದೇಶ ಮತ್ತೆ ರಿಟ್ರೀವ್: ರೇಣುಕಾಸ್ವಾಮಿ ಹತ್ಯೆ ಬಳಿಕ ಮೊಬೈಲ್‌ನಲ್ಲಿ ಅಳಸಿ ಹಾಕಲಾಗಿದ್ದ ಮಾಹಿತಿ ಸಂಗ್ರಹಕ್ಕೆ ರೇಣುಕಾಸ್ವಾಮಿ ಹಾಗೂ ನಟ ದರ್ಶನ್ ಗ್ಯಾಂಗ್‌ರವರ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಿ ಪೊಲೀಸರು ಮತ್ತೆ ದತ್ತಾಂಶ ಪಡೆದಿದ್ದಾರೆ.
ಕೊಲೆಗೆ ಮೆಗ್ಗರ್ ಡಿವೈಸ್ ಸಾಕ್ಷ್ಯ: ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಡಿವೈಸ್ ಅನ್ನು ಆನ್‌ಲೈನ್‌ಲ್ಲಿ ಆರೋಪಿ ಧನರಾಜ್ ಅಲಿಯಾಸ್ ರಾಜ ಖರೀದಿಸಿದ್ದ. ಆದರೆ ಹತ್ಯೆ ಬಳಿಕ ಆ ಮೆಗ್ಗರ್ ಅನ್ನು ರಾಜಕಾಲುವೆಗೆ ಆರೋಪಿಗಳು ಎಸೆದಿದ್ದರು. ಆದರೆ ಆನ್‌ಲೈನ್‌ನಲ್ಲಿ ಮೆಗ್ಗರ್ ಖರೀದಿಸಿದ್ದಕ್ಕೆ ಪುರಾವೆಯು ತನಿಖೆಯಲ್ಲಿ ಪೊಲೀಸರಿಗೆ ಲಭಿಸಿದೆ.
ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 14 ಮಂದಿ ವಿರುದ್ಧ ಕೊಲೆ ಮತ್ತು ಅಪಹರಣ ಹಾಗೂ ಕೇಶವ, ಕಾರ್ತಿಕ್, ಕಪ್ಪೆ ವಿರುದ್ಧ ಸಾಕ್ಷ್ಯ ನಾಶ ಆರೋಪವನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದ ನಾಲ್ವರ ಪೈಕಿ ಕೇಶವಮೂರ್ತಿ, ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಅಲಿಯಾಸ್ ಕಪ್ಪೆ ಮೇಲೆ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ. ಪಟ್ಟಣಗೆರೆ ಶೆಡ್‌ನಿಂದ ಮೃತದೇಹವನ್ನು ಸಾಗಿಸಲು ಕೂಡ ಈ ಮೂವರು ನೆರವಾಗಿದ್ದರು. ಆದರೆ ಹತ್ಯೆಯಲ್ಲಿ ಅವರು ಪಾಲ್ಗೊಳ್ಳದಿರುವ ಸಂಗತಿ ತನಿಖೆಯಲ್ಲಿ ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಕೇಶವ, ನಿಖಿಲ್ ಹಾಗೂ ಕಾರ್ತಿಕ್ ವಿರುದ್ಧ ಐಪಿಸಿ 201 (ಸಾಕ್ಷ್ಯ ನಾಶ) ಅಡಿ ಆರೋಪಿಸಲಾಗಿದೆ. ಆದರೆ ಪೊಲೀಸರಿಗೆ ಶರಣಾಗಿದ್ದ ಮತ್ತೊಬ್ಬ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗ ಅಧ್ಯಕ್ಷ ರಾಘವೇಂದ್ರ ಹತ್ಯೆಯಲ್ಲಿ ಪಾಲ್ಗೊಂಡಿದ್ದಾನೆ. ಹೀಗಾಗಿ ಆತನ ಮೇಲೆ ಕೊಲೆ ಹಾಗೂ ಅಪಹರಣ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.