ಡೈನಿಂಗ್‌ ಟೇಬಲ್‌ನಲ್ಲಿ ಕೂತು ಮೀನೂಟ ಮಾಡುವಾಗಲೇ ಇರಿದು ನಿವೃತ್ತ ಡಿಜಿ-ಐಜಿಪಿ ಹ*

| N/A | Published : Apr 22 2025, 01:53 AM IST / Updated: Apr 22 2025, 05:21 AM IST

ಸಾರಾಂಶ

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಡೈನಿಂಗ್‌ ಟೇಬಲ್‌ನಲ್ಲಿ ಕೂತು ಊಟ ಮಾಡುವಾಗ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗಿದೆ.

ಬೆಂಗಳೂರು : ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಡೈನಿಂಗ್‌ ಟೇಬಲ್‌ನಲ್ಲಿ ಕೂತು ಊಟ ಮಾಡುವಾಗ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗಿದೆ.

ಭಾನುವಾರ ಮಧ್ಯಾಹ್ನ ಓಂ ಪ್ರಕಾಶ್‌ ಅವರು ಮೀನೂಟ ತರಿಸಿಕೊಂಡಿದ್ದರು. ಡೈನಿಂಗ್ ಟೇಬಲ್‌ನಲ್ಲಿ ಕೂತು ಊಟ ಮಾಡುವಾಗ ದಂಪತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಪತ್ನಿ ಪಲ್ಲವಿ ಏಕಾಏಕಿ ಚಾಕುವಿನಿಂದ ಓಂ ಪ್ರಕಾಶ್‌ ಮುಖ, ಕುತ್ತಿಗೆ, ತಲೆ ಸೇರಿ ದೇಹದ ಇತರೆ ಭಾಗಗಳಿಗೆ ಹತ್ತಕ್ಕೂ ಅಧಿಕ ಬಾರಿ ಇರಿದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ತಟ್ಟೆಯಲ್ಲಿ ಒಂದು ಪೂರ್ಣ ಮೀನು, ನೆಲದಲ್ಲಿ ಅರ್ಧ ಮೀನು ಬಿದ್ದಿರುವುದು ಪೊಲೀಸರ ಪರಿಶೀಲನೆ ವೇಳೆ ಕಂಡು ಬಂದಿದೆ.

ಕೃತಿ ಹೈಡ್ರಾಮಾ:

ಓಂ ಪ್ರಕಾಶ್‌ ಕೊಲೆ ವೇಳೆ ಮನೆಯಲ್ಲಿ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಇದ್ದರು. ಕೊಲೆ ಬಳಿಕ ಪಲ್ಲವಿ ಸ್ನೇಹಿತೆಗೆ ವಿಡಿಯೋ ಕರೆ ಮಾಡಿ ಐ ಕಿಲ್ಡ್‌ ಮಾನ್‌ಸ್ಟರ್‌ ಎಂದಿದ್ದಾರೆ. ಕೊಲೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಲ್ಲವಿ ಮತ್ತು ಆಕೆ ಪುತ್ರಿ ಕೃತಿಯನ್ನು ವಶಕ್ಕೆ ಪಡೆದು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಕೃತಿ ಪೊಲೀಸರ ಜೀಪು ಹತ್ತಲು ನಿರಾಕರಿಸಿ ಕೆಲ ಕಾಲ ಹೈಡ್ರಾಮಾ ಸೃಷ್ಟಿದ್ದಳು. ಈಕೆಯನ್ನು ವಶಕ್ಕೆ ಪಡೆಯುವಾಗ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳಿಗೆ ಉಗುರುಗಳಿಂದ ಗೀರಿದ್ದಳು. ಆದರೂ ಬಿಡದೆ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಠಾಣೆಯಲ್ಲೂ ಹೈಡ್ರಾಮಾ:

ಇನ್ನು ಸೋಮವಾರ ಬೆಳಗ್ಗೆ ಪಲ್ಲವಿ ಮತ್ತು ಆಕೆಯ ಪುತ್ರಿ ಕೃತಿಯ ಬೆರಳಚ್ಚು ಸಂಗ್ರಹಿಸುವಲ್ಲಿ ಪೊಲೀಸರು ಹರಸಾಹಸಪಟ್ಟಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ತಾಯಿ-ಮಗಳ ಬೆರಳಚ್ಚು ಸಂಗ್ರಹಿಸಲು ಮುಂದಾದಾಗ ಆರಂಭದಲ್ಲಿ ಇಬ್ಬರೂ ಸಹಕರಿಸಿಲ್ಲ. ಅದರಲ್ಲೂ ಕೃತಿ ಮತ್ತೆ ತನ್ನ ಹೈಡ್ರಾಮಾ ಮುಂದುವರೆಸಿದ್ದಾಳೆ. ನನ್ನ ಬೆರಳಚ್ಚು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಚೀರಾಡಿದ್ದಾಳೆ. ಆದರೂ ಬಿಡದ ಪೊಲೀಸರು ಹಾಗೂ ಎಫ್‌ಎಸ್ಎಲ್‌ ತಜ್ಞರು ತಾಯಿ-ಮಗಳ ಬೆರಳಚ್ಚು ಸಂಗ್ರಹಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಚಾಕು ಹಾಗೂ ಮೃತದೇಹದ ಮೇಲಿನ ಬೆರಳಚ್ಚು ಹೋಲಿಕೆ ಮಾಡಲಿದ್ದಾರೆ.

ತಂದೆಯನ್ನು ಕರೆತಂದಿದ್ದ ಪುತ್ರಿ:

ಕೌಟುಂಬಿಕ ಕಲಹದಿಂದ ಬೇಸರಗೊಂಡು ಓಂ ಪ್ರಕಾಶ್‌ ಕಾರವಾರದ ತಂಗಿ ಮನೆಗೆ ತೆರಳಿದ್ದರು. ಎರಡು ದಿನಗಳ ಹಿಂದೆಯಷ್ಟೇ ಪುತ್ರಿ ಕೃತಿ ಕಾರವಾರಕ್ಕೆ ತೆರಳಿ ತಂದೆ ಓಂ ಪ್ರಕಾಶ್‌ ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕರೆತಂದಿದ್ದಳು. ಭಾನುವಾರ ಓಂ ಪ್ರಕಾಶ್‌ ಅವರ ಕೊಲೆಯಾಗಿದೆ. ಹೀಗಾಗಿ ಓಂ ಪ್ರಕಾಶ್‌ರನ್ನು ಕೃತಿ ಬೆಂಗಳೂರಿಗೆ ಯಾವ ಉದ್ದೇಶಕ್ಕಾಗಿ ಕರೆತಂದಿದ್ದಳು ಎಂಬುದು ತನಿಖೆಯಿಂದ ತಿಳಿದು ಬರಲಿದೆ.