ಸಾರಾಂಶ
ಬೆಂಗಳೂರು : ಭೀಕರವಾಗಿ ಕೊಲೆಯಾದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರ ಅಂತ್ಯಕ್ರಿಯೆ ಪೊಲೀಸ್ ಗೌರವದೊಂದಿಗೆ ಸೋಮವಾರ ನಗರದ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನೆರವೇರಿತು.
ಬೆಳಗ್ಗೆ ಪೊಲೀಸರು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಓಂ ಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು. ಬಳಿಕ ಎಚ್ಎಸ್ಆರ್ ಲೇಔಟ್‌ನ ಎಂಸಿಎಚ್‌ಎಸ್ ಕ್ಲಬ್ ಆವರಣದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.
ಈ ವೇಳೆ ಕುಟುಂಬದ ಸದಸ್ಯರು, ಸಂಬಂಧಿಕರು, ಪೊಲೀಸ್ ಅಧಿಕಾರಿಗಳು, ಕೆಲ ಐಎಎಸ್ ಅಧಿಕಾರಿಗಳು, ಮಾಜಿ ಪೊಲೀಸ್ ಅಧಿಕಾರಿಗಳು, ಸ್ನೇಹಿತರು-ಆಪ್ತರು ಸೇರಿ ನಗರದ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಓಂ ಪ್ರಕಾಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಪ್ರಾರ್ಥಿವ ಶರೀರಕ್ಕೆ ಪೊಲೀಸ್ ಗೌರವ ವಂದನೆ ಸೂಚಿಸಲಾಯಿತು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಐಎಎಸ್ ಅಧಿಕಾರಿ ಉಮಾಶಂಕರ್, ನಿವೃತ್ತ ಡಿಜಿಪಿ ಭಾಸ್ಕರ್ ರಾವ್ ಸೇರಿ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳು ಓಂ ಪ್ರಕಾಶ್ ಅವರ ಪ್ರಾರ್ಥಿವ ಶರೀರಕ್ಕೆ ಹೂಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.
ಬಳಿಕ ಪುತ್ರ ಕಾರ್ತಿಕೇಶ್ ಹಾಗೂ ಕುಟುಂಬಸ್ಥರು ಬಿಹಾರಿ ಸಾಂಪ್ರದಾಯದಂತೆ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು. ನಂತರ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಪ್ರಾರ್ಥಿವ ಶರೀರ ಕೊಂಡೊಯ್ದು ಅಂತಿಮ ಧಾರ್ಮಿಕ ವಿಧಿವಿಧಾನ ಪೂರೈಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕುಟುಂಬಸ್ಥರ ಆಕ್ರಂದನ:
ಇದಕ್ಕೂ ಮುನ್ನ ಓಂ ಪ್ರಕಾಶ್ ಅವರ ಮೃತದೇಹವನ್ನು ಎಚ್ಎಸ್ಆರ್ ಲೇಔಟ್‌ನ ಎಂಸಿಎಚ್‌ಎಸ್ ಕ್ಲಬ್ ಆವರಣಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪುತ್ರ ಕಾರ್ತಿಕೇಶ್, ಸೊಸೆ, ಸಹೋದರಿ ಸರಿತಾ ಕುಮಾರಿ ಸೇರಿ ಅವರ ಸಂಬಂಧಿಕರು ಕಣ್ಣೀರಿಟ್ಟರು. ಚಿತಾಗಾರದ ಬಳಿಯೂ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಕಣ್ಣೀರು ಸುರಿಸಿದರು.
ಹೋಗಬೇಡ ಎಂದರೂ ಹೋದ: ತಂಗಿ ಕಣ್ಣೀರು
ಅಣ್ಣ ಓಂ ಪ್ರಕಾಶ್ ಮನೆಯಿಂದ ಬೆಂಗಳೂರಿಗೆ ಹೊರಡುವಾಗ ಹೋಗಬೇಡ ಎಂದಿದ್ದೆ. ಎರಡು ದಿನದಲ್ಲಿ ಬರುವೆ ಎಂದು ಹೇಳಿ ಹೋದ. ಆದರೆ, ಎರಡು ದಿನದಲ್ಲಿ ವಾಪಸ್ ಬರಲೇ ಇಲ್ಲ. ನಾಲ್ಕೈದು ಬಾರಿ ಕರೆ ಮಾಡಿ ನನ್ನನ್ನೂ ಬಾ ಎಂದು ಕರೆದ. ಆದರೆ, ನಾನು ಹೋಗಲಿಲ್ಲ. ನಾನು ಅವತ್ತೇ ಹೋಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ತಂಗಿ ಸರಿತಾ ಕುಮಾರಿ ಕಣ್ಣೀರುಗೈದರು.
ಇಂತಹ ಹೆಂಡತಿ, ಮಗಳು ಇರುತ್ತಾರಾ? ಎಷ್ಟು ಟಾರ್ಚರ್ ನೀಡಿದ್ದಾರೆ. ಎಷ್ಟು ಕ್ರೌರ್ಯ ಮೆರೆದಿದ್ದಾರೆ. ತಾಯಿ-ಮಗಳಿಗೆ ದುರಂಹಕಾರ ಜಾಸ್ತಿ. ಕೆಟ್ಟ ಮಾತುಗಳಲ್ಲೇ ಅಣ್ಣನನ್ನು ಬೈಯುತ್ತಿದ್ದರು. ನಮ್ಮ ಬ್ಯಾಕ್ ಬೋನ್ ಆಗಿದ್ದ ಅಣ್ಣ ಹೋಗಿ ಬಿಟ್ಟ ಎಂದು ಓಂ ಪ್ರಕಾಶ್ ಅವರ ಮೃತದೇಹದ ಎದುರು ರೋದಿಸಿದರು.