ನಡು ರಸ್ತೆಯಲ್ಲಿ ಪಾರ್ಟಿ ಮುಗಿಸಿ ಸ್ನೇಹಿತನ ಜತೆಗೆ ಕಾರಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ರೌಡಿಶೀಟರ್‌ ಬರ್ಬರ ಹತ್ಯೆ

| N/A | Published : Feb 24 2025, 12:30 AM IST / Updated: Feb 24 2025, 05:13 AM IST

ಸಾರಾಂಶ

ಪಾರ್ಟಿ ಮುಗಿಸಿ ಸ್ನೇಹಿತನ ಜತೆಗೆ ಕಾರಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ರೌಡಿ ಶೀಟರ್‌ನನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ಪಾರ್ಟಿ ಮುಗಿಸಿ ಸ್ನೇಹಿತನ ಜತೆಗೆ ಕಾರಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ರೌಡಿ ಶೀಟರ್‌ನನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆನೇಪಾಳ್ಯ ನಿವಾಸಿ ಹೈದರ್‌ ಅಲಿ (38) ಹತ್ಯೆಯಾದ ರೌಡಿ. ಈತನ ಸ್ನೇಹಿತನ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಅಶೋಕನಗರ ಫುಟ್‌ಬಾಲ್‌ ಸ್ಟೇಡಿಯಂನ ಗೇಟ್‌ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಹತ್ಯೆಯಾದ ಹೈದರ್‌ ಅಲಿ ಅಶೋಕನಗರ ಠಾಣೆ ರೌಡಿ ಶೀಟರ್‌ ಆಗಿದ್ದಾನೆ. ಶನಿವಾರ ರೆಸಿಡೆನ್ಸಿ ರಸ್ತೆಯ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ತಡರಾತ್ರಿವರೆಗೂ ಸ್ನೇಹಿತರ ಜತೆಗೆ ಪಾರ್ಟಿ ಮಾಡಿದ ಬಳಿಕ ಮುಂಜಾನೆ ಸುಮಾರು 1.30ಕ್ಕೆ ತನ್ನ ಸ್ನೇಹಿತನ ಜತೆಗೆ ಕಾರಿನಲ್ಲಿ ಆನೇಪಾಳ್ಯದ ಮನೆ ಕಡೆಗೆ ಹೊರಟ್ಟಿದ್ದಾನೆ. ಅಶೋಕನಗರದ ಫುಟ್‌ಬಾಲ್‌ ಮೈದಾನದ ಗೇಟ್‌ ಬಳಿ ತೆರಳುವಾಗ ಕಾರಿನಲ್ಲಿ ಬಂದಿರುವ ನಾಲ್ಕೈದು ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ತಡ ಮಾಡದೇ ಮಾರಕಾಸ್ತ್ರಗಳಿಂದ ರೌಡಿ ಹೈದರ್‌ ಅಲಿ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಹಲ್ಲೆ ತಡೆಯಲು ಮುಂದಾದ ಹೈದರ್‌ ಅಲಿಯ ಸ್ನೇಹಿತನ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿ ಹೈದರ್‌ ಅಲಿ ಹಾಗೂ ಆತನ ಸ್ನೇಹಿತನನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಹೈದರ್‌ ಅಲಿ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಾಯಾಳು ಸ್ನೇಹಿತನಿಗೆ ಚಿಕಿತ್ಸೆ ಮುಂದುವರೆದಿದೆ.

ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿರುದ್ಧ 11 ಪ್ರಕರಣ ದಾಖಲು

ರೌಡಿ ಹೈದರ್‌ ಅಲಿ ವಿರುದ್ಧ 2014ರಲ್ಲಿ ಅಶೋಕನಗರ ಠಾಣೆ ಪೊಲೀಸರು ರೌಡಿ ಶೀಟ್‌ ತೆರೆದಿದ್ದರು. ಈತನ ವಿರುದ್ಧ ಅಶೋಕನಗರ, ಶಾಂತಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾರಣಾಂತಿಕ ಹಲ್ಲೆ, ಎನ್‌ಡಿಪಿಎಸ್‌ ಸೇರಿದಂತೆ 11 ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಿಂದ ಈತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ತಿಳಿದು ಬಂದಿದೆ.ಆಸ್ಪತ್ರೆ ಬಳಿ ಉದ್ವಿಗ್ನ ಸ್ಥಿತಿ ನಿರ್ಮಾಣ

ರೌಡಿ ಹೈದರ್‌ ಅಲಿ ಹತ್ಯೆ ಸುದ್ದಿ ತಿಳಿದು ಭಾನುವಾರ ಮುಂಜಾನೆ ಆನೇಪಾಳ್ಯ, ಶಾಂತಿನಗರ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಾರೀ ಸಂಖ್ಯೆಯ ಜನ ಬೌರಿಂಗ್‌ ಆಸ್ಪತ್ರೆಗೆ ಬಳಿ ಜಮಾಯಿಸಿದ್ದರು. ಈ ವೇಳೆ ಕೆಲವರು ಕೂಗಾಡಿ ಹೈದರ್‌ ಅಲಿ ಹತ್ಯೆಗೆ ಆಕ್ರೋಶ ಹೊರಹಾಕಿದರು. ಹೀಗಾಗಿ ಆಸ್ಪತ್ರೆ ಬಳಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಪರಿಸ್ಥಿಯನ್ನು ನಿಯಂತ್ರಿಸಲಾಯಿತು.ಶಾಸಕ ಹ್ಯಾರಿಸ್‌ ಪರ ಪ್ರಚಾರ

ಹತ್ಯೆಯಾದ ರೌಡಿ ಹೈದರ್‌ ಅಲಿ ಮತ್ತು ಆತನ ಸಹೋದರ ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಜತೆಗೆ ಗುರುತಿಸಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಹ್ಯಾರಿಸ್‌ ಪರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು ಎನ್ನಲಾಗಿದೆ. ಹತ್ಯೆ ಬೆನ್ನಲ್ಲೇ ಹೈದರ್‌ ಅಲಿ ಮತ್ತು ಶಾಸಕ ಹ್ಯಾರಿಸ್‌ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.ರೌಡಿ ಶೀಟರ್‌ ಹೈದರ್‌ ಅಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ಮಾರ್ಗ ಮಧ್ಯೆ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿದೆ.

-ಎಚ್‌.ಟಿ.ಶೇಖರ್‌, ಕೇಂದ್ರ ವಿಭಾಗದ ಡಿಸಿಪಿ