ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಉಬರ್ ಚಾಲಕನಿಗೆ ಬೆದರಿಸಿ ಕಾರು ದೋಚಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಇಬ್ಬರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆ.ಆರ್. ಪುರ ಸಮೀಪದ ಟಿ.ಸಿ. ಪಾಳ್ಯ ನಿವಾಸಿಗಳಾದ ಶ್ರೀಕಾಂತ್ ಹಾಗೂ ಹೇಮಂತ್ ಬಂಧಿತರಾಗಿದ್ದು, ಆರೋಪಿಗಳಿಂದ ಕಾರು ಹಾಗೂ ಮೂರು ಮೊಬೈಲ್ ಸೇರಿದಂತೆ 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಈಜಿಪುರ ಸಿಗ್ನಲ್ ಬಳಿ ಗ್ರಾಹಕರ ಪಿಕ್ ಆಪ್ ಮಾಡಲು ಉಬರ್ ಚಾಲಕ ಅಶೋಕ್ ತೆರಳುತ್ತಿದ್ದರು. ಆ ವೇಳೆ ಮಾರ್ಗ ಮಧ್ಯೆ ಆತನನ್ನು ಅಡ್ಡಗಟ್ಟಿ ಕಾರು ಹಾಗೂ ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಕಲಾವತಿ ನೇತೃತ್ವದ ತಂಡವು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುಲಿಗೆಕೋರರನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಹೇಮಂತ್ ಹಾಗೂ ಶ್ರೀಕಾಂತ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ಇಬ್ಬರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಸಾರ್ವಜನಿಕರಿಗೆ ಬೆದರಿಸಿ ಹಣ ಹಾಗೂ ಚಿನ್ನಾಭರಣ ಸುಲಿಗೆಗೆ ಶ್ರೀಕಾಂತ್ ಕುಖ್ಯಾತನಾಗಿದ್ದ. ಅದೇ ರೀತಿ ಆ.27 ರಂದು ಈಜಿಪುರದಿಂದ ದೊಮ್ಮಲೂರು ಕಡೆಗೆ ಗ್ರಾಹಕನನ್ನು ಪಿಕ್ ಮಾಡಲು ಕಾರಿನಲ್ಲಿ ಅಶೋಕ್ ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಆರೋಪಿಗಳು, ಚಾಲಕನನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ ಕಾರು ಹಾಗೂ ಮೂರು ಮೊಬೈಲ್ ದೋಚಿ ಪರಾರಿಯಾಗಿದ್ದರು. ತಕ್ಷಣವೇ ವಿವೇಕನಗರ ಠಾಣೆಗೆ ತೆರಳಿ ಸಂತ್ರಸ್ತ ದೂರು ದಾಖಲಿಸಿದ್ದರು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳು ಜೈಲಿಗೆ ಅಟ್ಟಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.