ಸಾರಾಂಶ
ಇತ್ತೀಚೆಗೆ ಮದ್ಯದ ಅಮಲಿನಲ್ಲಿ ಐವರು ನಾಗರಿಕರಿಗೆ ಚಾಕುವಿನಿಂದ ಇರಿದು ಗೂಂಡಾಗಿರಿ ನಡೆಸಿ ಪರಾರಿಯಾಗಿದ್ದ ರೌಡಿ ಹಾಗೂ ಆತನ ಕುಟುಂಬದ ಮೂವರು ಸದಸ್ಯರನ್ನು ಇಂದಿರಾ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬೆಂಗಳೂರು : ಇತ್ತೀಚೆಗೆ ಮದ್ಯದ ಅಮಲಿನಲ್ಲಿ ಐವರು ನಾಗರಿಕರಿಗೆ ಚಾಕುವಿನಿಂದ ಇರಿದು ಗೂಂಡಾಗಿರಿ ನಡೆಸಿ ಪರಾರಿಯಾಗಿದ್ದ ರೌಡಿ ಹಾಗೂ ಆತನ ಕುಟುಂಬದ ಮೂವರು ಸದಸ್ಯರನ್ನು ಇಂದಿರಾ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಿನ್ನಮಂಗಲದ ರೌಡಿ ಕದಂಬ ಜತೆ ಈ ಕೃತ್ಯ ಎಸಗಿದ ನಂತರ ತಪ್ಪಿಸಿಕೊಳ್ಳಲು ರೌಡಿಗೆ ನೆರವಾದ ತಪ್ಪಿಗೆ ಆತನ ತಂದೆ ಸುರೇಶ್, ಹಿರಿಯ ಸೋದರ ವಿಷ್ಣು ಹಾಗೂ ಸೋದರಿ ಸುಮತಿ ಜೈಲು ಸೇರುವಂತಾಗಿದೆ.
ವಾರದ ಹಿಂದೆ ಇಂದಿರಾನಗರ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆರು ತಾಸಿನಲ್ಲೇ ಐವರಿಗೆ ಚಾಕುವಿನಿಂದ ಇರಿದು ರೌಡಿ ಕದಂಬ ದಾದಾಗಿರಿ ನಡೆಸಿ ಪರಾರಿಯಾಗಿದ್ದ. ಈ ಸರಣಿ ಹತ್ಯೆ ಯತ್ನದ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ರೌಡಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ರಚಿಸಿದ್ದರು. ಆರು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನೆಗೆ ರೌಡಿ ಪರಿವಾರವನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಹೊಸಕೋಟೆಯಲ್ಲಿ ರೌಡಿ ಕದಂಬ ಸೆರೆಯಾದರೆ, ಇನ್ನುಳಿದವರು ಮಲ್ಲೇಶ್ವರ ಹಾಗೂ ಇತರೆಡೆ ಬಂಧಿತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಯಲ್ಲಿ ರೌಡಿ ಕದಂಬ ನಿರತನಾಗಿದ್ದು, ಈತನ ವಿರುದ್ಧ ಸುಲಿಗೆ, ದರೋಡೆ ಯತ್ನ ಹಾಗೂ ಬೆದರಿಕೆ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಕ್ರಿಮಿನಲ್ ಚರಿತ್ರೆ ಹಿನ್ನಲೆಯಲ್ಲಿ ಇಂದಿರಾನಗರ ಠಾಣೆಯಲ್ಲಿ ಕದಂಬನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿನಾ ಕಾರಣ ಐವರಿಗೆ ಚಾಕು ಇರಿತ:
ಫೆ.8ರಂದು ರಾತ್ರಿ 9ರಿಂದ ನಸುಕಿನ 3ರವರೆಗೆ ಮದ್ಯದ ಅಮಲಿನಲ್ಲಿ ದಾರಿಯಲ್ಲಿ ತನಗೆ ಸಿಕ್ಕಿದ್ದ ಐವರಿಗೆ ಆತ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಇಂದಿರಾನಗರದ 6ನೇ ಮುಖ್ಯರಸ್ತೆಯಲ್ಲಿ ಬೈಕ್ ಸವಾರ ಜ್ವಸಂತ್, 100 ಅಡಿ ರಸ್ತೆ ಕುಂಡು ಹೋಟೆಲ್ ಬಳಿ ಪಾನಿಪೂರಿ ವ್ಯಾಪಾರಿ ದೀಪಕ್ ಕುಮಾರ್, ಇಂದಿರಾನಗರದ ಎಂಐ ಶೋರೂಂ ಸಮೀಪ ಮತ್ತೊಬ್ಬ ಪಾನಿಪೂರಿ ವ್ಯಾಪಾರಿ ತಮ್ಮಯ್ಯ, ಲೋನೋ ಪಬ್ ಬಳಿ ರ್ಯಾಪಿಡೋ ಸವಾರ ಆದಿಲ್ ಹಾಗೂ ಕೃಷ್ಣ ದೇವಾಲಯ ರಸ್ತೆಯಲ್ಲಿ ಖಾಸಗಿ ಕಂಪನಿ ಕಾವಲುಗಾರ ಮಹೇಶ್ ಅವರಿಗೆ ಕದಂಬ ಚಾಕು ಇರಿದು ಪರಾರಿಯಾಗಿದ್ದ.
ಮೊಬೈಲ್ ಬಳಸದ
ರೌಡಿ ಸೆರೆ ರೋಚಕ
ಸರಣಿ ಹತ್ಯೆ ಯತ್ನ ಕೃತ್ಯಗಳ ತನಿಖೆಗಿಳಿದ ಪೊಲೀಸರಿಗೆ ಮೊಬೈಲ್ ಬಳಸದಿರುವ ರೌಡಿ ಸುಳಿವು ಪತ್ತೆ ಹಚ್ಚುವುದು ಸವಾಲಾಯಿತು. ಆಗ ತಾಂತ್ರಿಕತೆ ಪಕ್ಕಕ್ಕೆ ಸರಿಸಿ ಸಾಂಪ್ರದಾಯಿಕ ಪೊಲೀಸ್ ವಿಧಾನ ಬಳಸಿದ ಡಿಸಿಪಿ ದೇವರಾಜ್ ನೇತೃತ್ವದ ತಂಡಗಳು, ಆರೋಪಿಯ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಬೆನ್ನುಹತ್ತಿದ್ದರು. ಆಗ ಕೃತ್ಯ ಎಸಗಿ ಬಂಧನ ಭೀತಿಯಿಂದ ನಗರ ತೊರೆದಿದ್ದ ಕದಂಬನ ರಕ್ಷಣೆಗೆ ಆತನ ತಂದೆ ಸುರೇಶ್, ಸೋದರ ವಿಷ್ಣು ಹಾಗೂ ಸೋದರಿ ಸುಮತಿ ಇರುವ ಸಂಗತಿ ಗೊತ್ತಾಯಿತು.
ಪುತ್ರನಿಗೆ ಜಾಮೀನು ಕೊಡಿಸಲು ವಕೀಲರ ಭೇಟಿಗೆ ತಂದೆ ಸುರೇಶ್ ತಾನೇ ಬೈಕ್‌ನಲ್ಲಿ ಕರೆದೊಯ್ದಿದ್ದ. ಈ ಮಾಹಿತಿ ಲಭ್ಯವಾದ ಕೂಡಲೇ ಕಾರ್ಯಪ್ರವೃತ್ತರಾದ ಸುಮಾರು 20 ಪೊಲೀಸರು, ಪ್ರತ್ಯೇಕವಾಗಿ ಆರೋಪಿಗಳನ್ನು ನೆರಳಿನಂತೆ ಹಿಂಬಾಲಿಸಿದರು. ಹೀಗೆ ಸತತ 72 ತಾಸುಗಳ ಕಾರ್ಯಾಚರಣೆ ಬಳಿಕ ಹೊಸಕೋಟೆ ಪೊಲೀಸ್ ಠಾಣೆ ಸನಿಹದಲ್ಲೇ ಕದಂಬ ಖಾಕಿ ಗಾಳಕ್ಕೆ ಬಿದ್ದಿದ್ದಾನೆ ಎಂದು ಮೂಲಗಳು ವಿವರಿಸಿವೆ.
ನಟ ವಿಷ್ಣುವರ್ಧನ್ ಚಿತ್ರದ
ಹೆಸರು ಮಕ್ಕಳಿಗೆ ಇಟ್ಟಿದ್ದ
ರೌಡಿ ಕದಂಬನ ತಂದೆ ಕನ್ನಡ ಚಲನಚಿತ್ರ ಖ್ಯಾತ ನಟ ದಿ.ವಿಷ್ಣುವರ್ಧನ್ ಅವರ ಅಭಿಮಾನಿ ಆಗಿದ್ದು, ಈ ಹಿಂದೆ ನಗರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಹ ಆಗಿದ್ದ. ಇದೇ ಅಭಿಮಾನದಿಂದಲೇ ತನ್ನ ಗಂಡು ಮಕ್ಕಳಿಗೆ ವಿಷ್ಣು ಹಾಗೂ ಕದಂಬ ಎಂದು ಸುರೇಶ್ ಹೆಸರಿಟ್ಟಿದ್ದ. ಕದಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಆ ನೆನಪಿಗೆ ತನ್ನ ಕಿರಿಯ ಪುತ್ರನಿಗೆ ಸಿನಿಮಾ ಹೆಸರನ್ನೇ ಸುರೇಶ್ ನಾಮಕರಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂದೆ ವಿರುದ್ಧ ಮತ್ತೆ ರೌಡಿಶೀಟ್
ಸರಣಿ ಹತ್ಯೆ ಯತ್ನ ಕೃತ್ಯದಲ್ಲಿ ತನ್ನ ಪುತ್ರನಿಗೆ ಸಹಕರಿಸಿದ ತಪ್ಪಿಗೆ ಈಗ ಕದಂಬನ ತಂದೆ ಹಾಗೂ ಹಿರಿಯ ಸೋದರನಿಗೆ ಸಂಕಷ್ಟ ಎದುರಾಗಿದೆ. ಸನ್ನಡತೆ ಕಾರಣಕ್ಕೆ 2013ರಲ್ಲಿ ರೌಡಿಪಟ್ಟಿಯಿಂದ ಕೈ ಬಿಡಲಾಗಿದ್ದ ಕದಂಭನ ತಂದೆ ಸುರೇಶ್ ವಿರುದ್ಧ ಮತ್ತೆ ರೌಡಿಪಟ್ಟಿ ತೆರೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.