ರೌಡಿಶೀಟರ್ ಯಶ್ವಂತ್ ಹತ್ಯೆ ಪ್ರಕರಣದ 18 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ರೌಡಿಶೀಟರ್ ಯಶ್ವಂತ್ ಹತ್ಯೆ ಪ್ರಕರಣದ 18 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಗೊರವನಹಳ್ಳಿಯ ದರ್ಶನ್ (28), ಶಿವಪುರದ ಸಚ್ಚಿನ್ ಅಲಿಯಾಸ್ ರಾಜು (24), ಗೊರವನಹಳ್ಳಿಯ ಧನುಷ್ ರಾಜು ಆರ್ (28), ವಿವಿ ನಗರದ ಸಿದ್ದರಾಜು (37), ಕೆ.ಎಚ್.ನಗರದ ಲೋಹಿತ್ ಬಿ.ಜೆ. ಅಲಿಯಾಸ್ ರೋಹಿ (34), ಗೊರವನಹಳ್ಳಿಯ ಮಹೇಶ ಜಿ.ಬಿ. ಅಲಿಯಾಸ್ ಬಾಂಬೆ (30), ಸಚಿನ್ ಅಲಿಯಾಸ್ ಕಪ್ಪೆ (25), ಲಂಕೇಶ್, ಸಂಜಯ್ ಗೌಡ, ನಿತಿನ್ , ವಿಜಯ್ ಬಂಧಿತ ಆರೋಪಿಗಳು. ಕೊಲೆ ಯತ್ನ ಪ್ರಕರಣದಡಿ ಮಹದೇಶ, ಮನೋಜ, ಮನ್ವಿತಾ, ದರ್ಶನ್ , ಹೇಮಂತ್ , ಸಚಿನ್, ಅಭಯ್ ಸೂರ್ಯ ಹಾಗೂ ಇಬ್ಬರು ಅಪ್ರಾಪ್ತರು ಸೇರಿ ಹಲವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭಾರಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನಗರದ ಹೊಳೇ ಆಂಜನೇಯಸ್ವಾಮಿ ದೇವಾಲಯ ರಸ್ತೆಯ ಶ್ರೀನಿವಾಸ ಹಾರ್ಡ್‌ವೇರ್ ಅಂಗಡಿ ಬಳಿ ಸಂಜೆ 5.30ರ ಸಮಯದಲ್ಲಿ ಸಿಗರೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿದ ಪರಿಣಾಮ ರಾತ್ರಿ ಸುಮಾರು 9.30ರ ಸಮಯದಲ್ಲಿ ಮತ್ತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸಚಿನ್ ಮತ್ತು ದರ್ಶನ್ ಕಡೆಯವರು ರೌಡಿಶೀಟರ್ ಯಶ್ವಂತ್ ಅಲಿಯಾಸ್ ಕಜ್ಜಿ ಎಂಬಾತನನ್ನು ರಿಪೀಸ್ ಪಟ್ಟಿಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಘಟನೆಯಿಂದಾಗಿ ಯಶ್ವಂತ್ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದ ಎಂದು ವಿವರಿಸಿದರು. ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಳವಳ್ಳಿ ಡಿವೈಎಸ್ಪಿ ಯಶವಂತಕುಮಾರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ನವೀನ್ ಎಚ್.ಎಸ್., ನಾರಾಯಣಿ, ಶ್ರೀಧರ್, ಅನಿಲ್‌ಕುಮಾರ್, ಪಿಎಸ್‌ಐಗಳಾದ ಮಂಜುನಾಥ್ ಕೆ., ರವಿ ಪಿ, ಶೇಖರ್, ರವಿಕುಮಾರ್, ಶ್ರವಣದಾಸರೆಡ್ಡಿ ಭೀಮಪ್ಪ ಸಿದ್ದಪ್ಪ ಬಾಣಸಿ ಹಾಗೂ ಸಿಬ್ಬಂದಿ ತಂಡ ರಚಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಆರೋಪಿಗಳನ್ನು ನಮ್ಮ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಕೊಲೆಯಾದ ಮರಳಿಗ ಗ್ರಾಮದ ಯಶ್ವಂತ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು. ಈತನ ಮೇಲೆ ಗುರುತರ ಆರೋಪವಿರುವುದರಿಂದ ಕಳೆದ ಫೆ.10ರಂದು ಗಡಿಪಾರು ಮಾಡಲು ಶಿಫಾರಸು ಮಾಡಲಾಗಿದ್ದು, ಎಸಿ ಕಚೇರಿಯಲ್ಲಿ ವಿಚಾರಣೆ ಬಾಕಿ ಇತ್ತು. ಮತ್ತೋರ್ವ ಆರೋಪಿ ಮಾದೇಶ ಅಲಿಯಾಸ್ ಚೋಟು ಮತ್ತೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿಸಿದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಎಸ್ ಐ.ಗಣೇಶ್ ಬಾಬು, ವೆಂಕಟೇಶ್, ರವಿಕುಮಾರ್, ಶ್ರೀನಿವಾಸ ಆಚಾರಿ, ಹೆಚ್.ಸಿ .ಮಹೇಶ, ಪ್ರಸನ್ನ, ಗುರಪ್ಪ ರಾಜೀವ್, ಮಂಜುನಾಥ್, ಓಂಕಾರಪ್ಪ, ಪೂರ್ಣಿಮಾ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಲೋಕೇಶ್, ರವಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿಗಳಾದ ಸಿ.ವಿ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಡಿವೈಎಸ್ಪಿ ಯಶ್ವಂತ್‌ಕುಮಾರ್ ಹಾಜರಿದ್ದರು.19ನೇ ವಯಸ್ಸಿನಲ್ಲೇ ರೌಡಿಯಾದ ಯಶ್ವಂತ್
ಮದ್ದೂರು: ಪಟ್ಟಣದ ಕೊಲ್ಲಿ ಸರ್ಕಲ್ ಸಮೀಪ ಎರಡು ಗುಂಪುಗಳ ನಡುವಿನ ಗ್ಯಾಂಗ್ ವಾರ್ ನಲ್ಲಿ ಹತ್ಯೆಗೊಳಗಾಗಿರುವ ಯಶವಂತ್ ಅಲಿಯಾಸ್ ಕಚ್ಚಿ 19ನೇ ವಯಸ್ಸಿನಲ್ಲಿ ರೌಡಿ ಶೀಟರ್ ಪಟ್ಟಕೇರಿದ್ದಾನೆ. ಮೂಲತಃ ತಾಲೂಕು ಕೊಪ್ಪ ಹೋಬಳಿ ಮರಳಿಗ ಗ್ರಾಮದ ಈತ ಕಳೆದ ಎರಡು ಮೂರು ದಿನಗಳ ಹಿಂದೆ 19ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಓಡಾಡಿಕೊಂಡಿದ್ದ ಯಶವಂತ ತನ್ನ ಹವಾ ಮೇಂಟೈನ್ ಮಾಡಿಕೊಂಡು ರೌಡಿ ಶೀಟರ್ ಪಟ್ಟ ಗಿಟ್ಟಿಸಿಕೊಂಡಿದ್ದನು. ಈತನಿಗೆ ಇದೇ ರೌಡಿ ಸಂ ಹೆಣ ಉರುಳಿಸುವಂತೆ ಮಾಡಿದೆ. ಸಂಬಂಧಿಕರ ವಿವಾಹಕ್ಕೆ ಬಂದಿದ್ದ ಯಶವಂತನನ್ನು ಪೂರ್ವ ಯೋಜಿತವಾಗಿ ಹತ್ಯೆ ನಡೆಸಲು ಸಂಚು ರೂಪಿಸಿದ್ದ ವಿರೋಧಿ ಗುಂಪು ರಾಜಿ ಪಂಚಾಯಿತಿ ನೆಪದಲ್ಲಿ ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದ ಯಶವಂತ ಈಗ ಬೀದಿ ಹೆಣವಾಗಿದ್ದಾನೆ.