ಸಾರಾಂಶ
ಬೆಂಗಳೂರು : ಅಸ್ಸಾಂ ಮೂಲದ ಮಾಯಾ ಗೊಗೋಯಿ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಮೃತಳ ಪ್ರಿಯಕರನ ಪತ್ತೆಗೆ ಪೂರ್ವ ವಿಭಾಗದ ಪೊಲೀಸರು ಹೊರ ರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಇಂದಿರಾನಗರದ 2ನೇ ಹಂತದ ದಿ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ಮಾಯಾ (19) ಕೊಲೆ ಮಾಡಿದ ಬಳಿಕ ಆಕೆಯ ಪ್ರಿಯಕರ ಕೇರಳ ಮೂಲದ ಆರವ್ ಅನಾಯ್ ನಗರ ತೊರೆದಿದ್ದಾನೆ. ಇಂದಿರಾನಗರದಿಂದ ಮೆಜೆಸ್ಟಿಕ್‌ಗೆ ಬಂದಿರುವ ಆರೋಪಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲು ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಆರೋಪಿಯ ಮೊಬೈಲ್ ಸ್ವಿಚ್ಢ್ ಆಫ್ ಆಗಿರುವುದು ಗೊತ್ತಾಗಿದೆ. ನಂತರ ಆತ ಎಲ್ಲಿಗೆ ಹೋದ ಎಂಬುದು ಸ್ಪಷ್ಟವಾಗಿಲ್ಲ. ಈಗಾಗಲೇ ಕೇರಳದ ಆತನ ಮನೆಗೆ ವಿಶೇಷ ಪೊಲೀಸ್ ತಂಡಗಳು ತೆರಳಿ ವಿಚಾರಿಸಿವೆ. ಆದರೆ ಹತ್ಯೆ ಮಾಡಿದ ಬಳಿಕ ತನ್ನೂರಿಗೆ ಹೋಗದೆ ಆರವ್ ಬೇರೆಡೆ ಹೋಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ತಲೆಮರೆಸಿಕೊಂಡಿರುವ ಪ್ರದೇಶದ ಸುಳಿವು ಸಿಕ್ಕಿದೆ. ಈ ಮಾಹಿತಿ ಆಧರಿಸಿ ಕೇರಳ ಸೇರಿದಂತೆ ಹೊರ ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಶೀಘ್ರದಲ್ಲಿ ಆತನನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತಳ ಕುಟುಂಬದವರಿಗೆ ಮಾಹಿತಿ: ಮೃತದೇಹವನ್ನು ಮಾಯಾಳ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಈ ಹತ್ಯೆ ವಿಚಾರವನ್ನು ಮಂಗಳವಾರವೇ ಮೃತಳ ಪೋಷಕರಿಗೆ ಮುಟ್ಟಿಸಲಾಗಿತ್ತು. ತಮ್ಮ ಮಗಳ ಹತ್ಯೆ ಸಂಗತಿ ತಿಳಿದು ಆಘಾತಗೊಂಡಿದ್ದ ಕುಟುಂಬದವರು, ಬುಧವಾರ ನಗರಕ್ಕೆ ಬಂದು ಇಂದಿರಾ ನಗರ ಠಾಣೆಗೆ ತೆರಳಿ ಪೊಲೀಸರಿಂದ ಮಾಹಿತಿ ಪಡೆದರು. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತಳ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.