ಮದ್ದೂರು ಡೇರಿಯಲ್ಲಿ ಅವ್ಯವಹಾರ ನೋಟಿಸ್ ಗೆ ಹೆದರಿ ಸಂಘದ ಕಾರ್ಯದರ್ಶಿ ಪ್ರಾಣ ಕಳೆದುಕೊಂಡ

| N/A | Published : Mar 29 2025, 12:31 AM IST / Updated: Mar 29 2025, 04:38 AM IST

man found dead

ಸಾರಾಂಶ

ಮನ್ಮುಲ್ ಮದ್ದೂರು ಉಪವಿಭಾಗದ ಕಚೇರಿ ವಿಸ್ತರಣಾಧಿಕಾರಿ ನಾಗರತ್ನ ತನಿಖೆ ನಡೆಸಿದ ನಂತರ ಕಾರ್ಯದರ್ಶಿ ಸೋಮಶೇಖರ್ ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

 ಮದ್ದೂರು : ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮನ್ಮುಲ್ ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ಹೆದರಿ ಸಂಘದ ಕಾರ್ಯದರ್ಶಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಗುರುವಾರ ರಾತ್ರಿ ಜರುಗಿದೆ.

ಗ್ರಾಮದ ಡೇರಿ ಕಾರ್ಯದರ್ಶಿ ಎಂ.ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡವರು.

ಗುರುವಾರ ರಾತ್ರಿ ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಅಸ್ವಸ್ಥಗೊಂಡ ಸೋಮಶೇಖರ್ ಅವರನ್ನು ಕುಟುಂಬದವರು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ 10.15 ಗಂಟೆ ಸುಮಾರಿಗೆ ಕೊನೆ ಉಸಿರೆಳದಿದ್ದಾರೆ. ಗ್ರಾಮದ ಡೇರಿಯಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಕಳೆದ 2023 ಮತ್ತು 24ನೇ ಸಾಲಿನಲ್ಲಿ ಪಶು ಆಹಾರ ಮಾರಾಟ ಮಾಡಿದ ಹಣವನ್ನು ಸಂಘದ ಖಾತೆಗೆ ಜಮಾ ಮಾಡದೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪವಾಗಿತ್ತು.

ಈ ಸಂಬಂಧ ಮನ್ಮುಲ್ ಮದ್ದೂರು ಉಪವಿಭಾಗದ ಕಚೇರಿ ವಿಸ್ತರಣಾಧಿಕಾರಿ ನಾಗರತ್ನ ತನಿಖೆ ನಡೆಸಿದ ನಂತರ ಕಾರ್ಯದರ್ಶಿ ಸೋಮಶೇಖರ್ ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದರಿಂದ ಭಯಗೊಂಡ ಸೋಮಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಬಿಎನ್ಎಸ್ ಕಾಯ್ದೆ 194ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೇಕೆಗಳ ಮೇಲೆ ಚಿರತೆ ದಾಳಿ

ಮಳವಳ್ಳಿ:  ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಪುಟ್ಟಸ್ವಾಮಿ ಮೇಕೆಗಳನ್ನು ತಮ್ಮ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಶುಕ್ರವಾರ ಬೆಳಗಿನ ಜಾವ ಚಿರತೆ ದಾಳಿ ಮಾಡಿ ಸುಮಾರು 25 ಸಾವಿರ ರು. ಮೌಲ್ಯದ ಎರಡು ಮೇಕೆಗಳನ್ನು ಕೊಂದು ತಿಂದು ಹಾಕಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತ ಪುಟ್ಟಸ್ವಾಮಿ ಮಾತನಾಡಿ, ತಳಗವಾದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ತಿಂಗಳಿಂದ ಚಿರತೆಗಳು ನಿರಂತರವಾಗಿ ದಾಳಿ ಮಾಡಿ ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿರತೆ ದಾಳಿ ತಡೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.