ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ 12 ಮಂದಿ ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ

| Published : Aug 05 2024, 12:42 AM IST / Updated: Aug 05 2024, 05:06 AM IST

ಸಾರಾಂಶ

ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ 12 ಮಂದಿ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಸಾಧಕ ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.

 ಬೆಂಗಳೂರು : ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ 12 ಮಂದಿ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಸಾಧಕ ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ನೇಮಕ ಪತ್ರ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಎಲ್ಲ ರೀತಿಯ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. 

ಈ ಹಿಂದೆ 2016-17ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ನಂತಹ ಕ್ರೀಡಾಕೂಟಗಳಲ್ಲಿ ಪದಕ ಪಡೆದವರನ್ನು ಸರ್ಕಾರಿ ಉದ್ಯೋಗಕ್ಕೆ ನೇರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದೆ. ಆದರೆ, ಸರ್ಕಾರ ಬದಲಾದ ಬಳಿಕ ಇದು ನೆನೆಗುದಿಗೆ ಬಿದ್ದಿತ್ತು. ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಇದನ್ನು ಜಾರಿಗೊಳಿಸಲು ಚಾಲನೆ ನೀಡಿದ್ದೇವೆ ಎಂದರು.

ಕ್ರೀಡಾ ಸಾಧಕರಿಗೆ ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಮಾತ್ರ ಶೇ.2ರಷ್ಟು ಮೀಸಲಾತಿ ಇತ್ತು. ನಾವು ನಮ್ಮ ಸರ್ಕಾರದಲ್ಲಿ ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಶೇ.3, ಇತರೆ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿ ಕರಡು ಅಧಿಸೂಚನೆ ಹೊರಡಿಸಿದ್ದೇವೆ. ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಕ್ರೀಡಾ ಸಾಧಕರ ನೇಮಕಾತಿಯಲ್ಲಿ ವಯೋಮಿತಿಯನ್ನು 45 ವರ್ಷದವರೆಗೆ ಸಡಿಲಗೊಳಿಸಲಾಗಿದೆ. ಪದಕ ಪಡೆದವರು ಪದವೀಧರರಾಗಿದ್ದರೆ ಕ್ಲಾಸ್‌ 1 ಅಥವಾ ಕ್ಲಾಸ್‌ 2 ಹುದ್ದೆ, ಪದವಿ ಪಡೆಯದವರಿಗೆ ಕ್ಲಾಸ್‌ ಸಿ ಮತ್ತು ಡಿ ಹುದ್ದೆಗಳನ್ನು ನೀಡಲಾಗುತ್ತದೆ ಎಂದರು.

ನೇಮಕಾತಿಗಾಗಿ ಕ್ರೀಡಾ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಬಂದ ಅರ್ಜಿಗಳನ್ನು ಪರಿಶೀಲಿಸಿ ಮುಖ್ಯಕಾರ್ಯದರ್ಶಿ ಅವರ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ. ಅದರ ಆಧಾರದಲ್ಲಿ ಇವತ್ತು 12 ಜನರಿಗೆ ನೇಮಕಾತಿ ಪತ್ರ ನೀಡಿದ್ದೇವೆ. ಈ ಪೈಕಿ ಒಬ್ಬರಿಗೆ ಮಾತ್ರ ಕ್ಲಾಸ್‌ 1 ಹುದ್ದೆ ದೊರಕಿದೆ. ಉಳಿದ 11 ಜನರಿಗೆ ಕ್ಲಾಸ್‌ 2 ಹುದ್ದೆ ಸಿಕ್ಕಿದೆ. ಅವರು 45 ವರ್ಷದೊಳಗೆ ತಮ್ಮನ್ನು ನೇಮಿಸಿರುವ ಹುದ್ದೆಗೆ ಸೇರ್ಪಡೆಯಾಗಬಹುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಭಾರತ ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. 143 ಕೋಟಿ ಜನಸಂಖ್ಯೆ ನಮ್ಮ ದೇಶದಲ್ಲಿದೆ. ಹೆಚ್ಚು ಜನ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ನಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆಯಬೇಕೆಂಬುದು ನಮ್ಮ ನಿರೀಕ್ಷೆ ಎಂದು ಅವರು ಹೇಳಿದರು.

ಮುಖ್ಯಮoತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿoದ ರಾಜು, ಯುವ ಸಬಲೀಕರಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮoಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು

ಬಾಕ್ಸ್‌ನೇಮಕಾತಿ ಪತ್ರ ಪಡೆದ

12 ಕ್ರೀಡಾ ಸಾಧಕರು

ಗಿರೀಶ್‌ ಎಚ್.ಎನ್‌. (ಪ್ಯಾರಾ ಅಥ್ಲೆಟಿಕ್ಸ್)‌, ದಿವ್ಯಾ ಟಿ.ಎಸ್.‌ (ಶೂಟಿಂಗ್)‌, ಉಷಾರಾಣಿ ಎನ್.‌ (ಕಬಡ್ಡಿ), ಸುಷ್ಮಿತಾ ಪವಾರ್‌ (ಕಬಡ್ಡಿ), ನಿಕ್ಕಿನ್‌ ತಿಮ್ಮಯ್ಯ (ಹಾಕಿ), ಎಸ್.ವಿ.ಸುನೀಲ್‌ (ಹಾಕಿ), ಕಿಶನ್‌ ಗಂಗೊಳ್ಳಿ (ಚೆಸ್)‌, ರಾಘವೇಂದ್ರ ರತ್ನಾಕರ ಅಣ್ವೇಕರ್‌ (ಈಜು), ರಾಧಾ ವಿ. (ಪ್ಯಾರಾ ಅಥ್ಲೆಟಿಕ್ಸ್)‌, ಶರತ್‌ ಎಂ.ಎಸ್‌. (ಪ್ಯಾರಾ ಅಥ್ಲೆಟಿಕ್ಸ್)‌, ಗುರುರಾಜ (ವೇಯ್ಟ್‌ ಲಿಫ್ಟಿಂಗ್)‌ ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ (ಕುರಾಶ್)‌.