ಸಾರಾಂಶ
ಓಟಿಟಿಯಲ್ಲಿ ವಿದೇಶದ ವೆಬ್ ಸಿರೀಸ್ ವೀಕ್ಷಿಸಿ ಜಾನಪದ ಗಾಯಕಿ ಸವಿತಾ ಅವರ ಪುತ್ರ ಗಾಂಧಾರ್ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು : ಓಟಿಟಿಯಲ್ಲಿ ವಿದೇಶದ ವೆಬ್ ಸಿರೀಸ್ ವೀಕ್ಷಿಸಿ ಜಾನಪದ ಗಾಯಕಿ ಸವಿತಾ ಅವರ ಪುತ್ರ ಗಾಂಧಾರ್ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ.
ಕಳೆದ ಭಾನುವಾರ ರಾತ್ರಿ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ಸಂಗೀತಗಾರ ಗಣೇಶ್ ಪ್ರಸಾದ್ ಹಾಗೂ ಜಾನಪದ ಗಾಯಕಿ ಸವಿತಾ ಅವರ ಎರಡನೇ ಪುತ್ರ ಗಾಂಧಾರ್ ಆತ್ಮ*ತ್ಯೆ ಮಾಡಿಕೊಂಡಿದ್ದ. ಉತ್ತರಹಳ್ಳಿ ರಸ್ತೆಯ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಮೃತ ಬಾಲಕ ಓದುತ್ತಿದ್ದ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಮೃತನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದಾಗ ವೆಬ್ ಸಿರೀಸ್ ವೀಕ್ಷಣೆ ಸಂಗತಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಸವಿತಾ ದಂಪತಿ ಹೊರ ಹೋಗುತ್ತಿದ್ದರು. ಅಲ್ಲದೆ ಅವರ ಹಿರಿಯ ಮಗ ಸಹ ಸಂಗೀತಾ ಕಾಲೇಜಿನಲ್ಲಿ ಓದುತ್ತಿದ್ದಾನೆ. ಹೀಗಾಗಿ ಮನೆಯಲ್ಲಿ ಏಕಾಂಗಿಯಾಗಿರುತ್ತಿದ್ದ ಗಾಂಧಾರ್, ಮನೆಯಲ್ಲಿ ಕುಳಿತು ಟಿವಿಯಲ್ಲಿ ಇಂಟರ್ ನೆಟ್ ಬಳಸಿ ಓಟಿಟಿಗಳಲ್ಲಿ ವಿಪರೀತ ವೆಬ್ ಸಿರೀಸ್ ನೋಡುತ್ತಿದ್ದ. ಕೆಲವು ಬಾರಿ ಮೊಬೈಲ್‌ನಲ್ಲಿ ಸಹ ಆತ ವೆಬ್ ಸಿರೀಸ್ ನೋಡುತ್ತಿದ್ದ. ಇತ್ತೀಚೆಗೆ ಜಪಾನ್ ಭಾಷೆಯ ಆತ್ಮಹತ್ಯೆ ಸುತ್ತ ಹೆಣೆದಿರುವ ‘ಡೆ* ನೋಟ್’ ವೆಬ್ ಸಿರೀಸ್ ಅನ್ನು ನೋಡಿ ಅದರಿಂದ ಆತ ಪ್ರಚೋದನೆಗೊಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ತನ್ನ ಬೆಡ್ ರೂಮ್‌ನ ಗೋಡೆಯಲ್ಲಿ ವೆಬ್ ಸಿರೀಸ್ ಚಿತ್ರವನ್ನು ಗಾಂಧಾರ್ ಬಿಡಿಸಿದ್ದ ಎನ್ನಲಾಗಿದೆ.
ಸೋಮವಾರ ಶಾಲೆಗೆ ಬರಲ್ಲ ಎಂದಿದ್ದ
ಶಾಲೆಯಲ್ಲಿ ಶನಿವಾರ ಲವಲವಿಕೆಯಿಂದಲೇ ಇದ್ದ ಗಾಂಧಾರ್, ತನ್ನ ಸಹಪಾಠಿಗಳ ಜತೆ ಸೋಮವಾರ ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದ. ಈ ಸಂಗತಿಯನ್ನು ಶಾಲೆಯ ಶಿಕ್ಷಕರು ಹಾಗೂ ಮೃತ ಗಾಂಧಾರ್‌ನ ಸಹಪಾಠಿಗಳನ್ನು ವಿಚಾರಣೆ ನಡೆಸಿದಾಗ ಗೊತ್ತಾಯಿತು. ಹೀಗಾಗಿ ಎರಡು ದಿನಗಳ ಮುಂಚೆಯೇ ಆತ ಆತ್ಮ*ತ್ಯೆಗೆ ನಿರ್ಧರಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ಶನಿವಾರ ಶಾಲೆಗೆ ಗಾಂಧಾರ್ ಹೋಗಿದ್ದ. ಅಂದು ಮಾಸಿಕ ಕಿರು ಪರೀಕ್ಷೆಯನ್ನು ಸಹ ಆತ ಬರೆದಿದ್ದ. ಅಲ್ಲದೆ ಬೇಸರದಿಂದ ಸಹ ಆತ ಇರಲಿಲ್ಲ. ಆತನ ನಡವಳಿಕೆ ಸಹಜವಾಗಿಯೇ ಇತ್ತು. ಅನುಮಾನ ಪಡುವಂತೆ ಗಾಂಧಾರ್ ನಡೆದುಕೊಂಡಿರಲಿಲ್ಲ ಎಂದು ಪೊಲೀಸರಿಗೆ ಶಿಕ್ಷಕರು ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ಗೆಳತಿಗೆ ತಮಾಷೆಗೆ ಕೀಟಲೆ
ಶಾಲೆಯ 6ನೇ ತರಗತಿ ವಿದ್ಯಾರ್ಥಿಯನ್ನು ‘ಡುಮ್ಮಿ’ ಎಂದು ಗಾಂಧಾರ್ ತಮಾಷೆಗೆ ರೇಗಿಸುತ್ತಿದ್ದ. ಆದರೆ ಆ ಬಾಲಕಿ ಸಹ ಕೀಟಲೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಬಗ್ಗೆ ಶಿಕ್ಷಕರು ಅಥವಾ ಪೋಷಕರಿಗೆ ಬಾಲಕಿ ದೂರು ನೀಡಿರಲಿಲ್ಲ. ಆದರೆ ತನ್ನ ಮರಣ ಪತ್ರದಲ್ಲಿ ಈ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಗಾಂಧಾರ್ ಕ್ಷಮೆ ಕೋರಿದ್ದ ಎನ್ನಲಾಗಿದೆ.