ಪ್ರಜ್ವಲ್‌ ರೇವಣ್ಣ ಅರೆಸ್ಟ್‌ಗೆ ಎಸ್‌ಐಟಿ 2 ರೀತಿಯ ಅಸ್ತ್ರ

| Published : May 17 2024, 01:36 AM IST / Updated: May 17 2024, 05:05 AM IST

ಪ್ರಜ್ವಲ್‌ ರೇವಣ್ಣ ಅರೆಸ್ಟ್‌ಗೆ ಎಸ್‌ಐಟಿ 2 ರೀತಿಯ ಅಸ್ತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶದಲ್ಲಿ ಅಜ್ಞಾತವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕಾನೂನು ಚೌಕಟ್ಟಿನಲ್ಲಿ ಬಿಗಿಗೊಳಿಸಲು ಎರಡು ಪ್ರಮುಖ ದಾಳಗಳನ್ನು ಉರುಳಿಸುವ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶದಲ್ಲಿ ಅಜ್ಞಾತವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕಾನೂನು ಚೌಕಟ್ಟಿನಲ್ಲಿ ಬಿಗಿಗೊಳಿಸಲು ಎರಡು ಪ್ರಮುಖ ದಾಳಗಳನ್ನು ಉರುಳಿಸುವ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

1. ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಶೀಘ್ರವೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವುದು. ಅದರಲ್ಲಿ ಪ್ರಜ್ವಲ್ ಅವರನ್ನು ನಾಪತ್ತೆಯಾಗಿರುವ ಆರೋಪಿ ಎಂದು ಉಲ್ಲೇಖಿಸುವುದು. ಈ ಆಧಾರದ ಮೇರೆಗೆ ನ್ಯಾಯಾಲಯದಲ್ಲಿ ಬಂಧನ ವಾರಂಟ್‌ ಪಡೆದು ಸಂಸದರ ವಿರುದ್ಧ ಇಂಟರ್‌ಪೋಲ್‌ ಮೂಲಕ ರೆಡ್ ಕಾರ್ನರ್‌ ನೋಟಿಸ್ ಜಾರಿಗೆ ಮುಂದಾಗುವುದು.

2. ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸಂಸದ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗೆ ಕೋರುವುದು. ಪಾಸ್‌ಪೋರ್ಟ್‌ ರದ್ದಾದರೆ ತಾವಾಗಿಯೇ ಸಂಸದರು ಸ್ವದೇಶಕ್ಕೆ ಮರಳಬಹುದು. ಇಲ್ಲದೆ ಹೋದರೆ ವಿದೇಶದಲ್ಲಿ ನೆಲೆಸಲು ಅವರು ಅನ್ಯ ಮಾರ್ಗ ಹುಡುಕಬೇಕಾಗಬಹುದು.

ಲೈಂಗಿಕ ಹಗರಣ ಬಯಲಾದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಪೂರ್ವನಿಗದಿಯಂತೆ ಬುಧವಾರ ಸ್ವದೇಶಕ್ಕೆ ಮರಳದೆ ಅಜ್ಞಾತವಾದ ಬೆನ್ನಲ್ಲೇ ಕಾನೂನು ಮೂಲಕ ಸಂಸದರನ್ನು ಗಾಳಕ್ಕೆ ಹಾಕಲು ಎಸ್‌ಐಟಿ ಯೋಜಿಸಿದೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಎಸ್‌ಐಟಿ ಅಧಿಕಾರಿಗಳು ಸಮಾಲೋಚನೆ ಸಹ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಸಿಗದೆ ತನಿಖೆ ಅಪೂರ್ಣವಾಗಲಿದೆ. ಈಗಾಗಲೇ ಸಂಸದರ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳಲ್ಲಿ ಸಂತ್ರಸ್ತೆಯರ ವಿಚಾರಣೆ ಸಹ ನಡೆದಿದೆ. ಹೀಗಾಗಿ ಆರೋಪಿ ಪತ್ತೆಗೆ ಕಾನೂನಿನಲ್ಲಿ ಲಭ್ಯವಿರುವ ಎಲ್ಲ ಆಸ್ತ್ರಗಳನ್ನು ಪ್ರಯೋಗಿಸಲು ಎಸ್‌ಐಟಿ ಗಂಭೀರವಾಗಿ ಯೋಜಿಸಿದೆ ಎನ್ನಲಾಗಿದೆ.

ಎಫ್‌ಎಸ್ಎಲ್‌ ವರದಿ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ?:

ತಮ್ಮ ಮನೆ ಮಹಿಳಾ ಕೆಲಸದಾಳು ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಈ ಪ್ರಕರಣದಲ್ಲಿ ತಂದೆ ಮೊದಲ ಆರೋಪಿಯಾಗಿದ್ದರೆ, ಪುತ್ರ ಎರಡನೇ ಆರೋಪಿಯಾಗಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ರೇವಣ್ಣ ಪಾತ್ರದ ಕುರಿತು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಸ್‌ಐಟಿ ಯೋಜಿಸಿದೆ ಎಂದು ತಿಳಿದು ಬಂದಿದೆ. 

ಈಗಾಗಲೇ ಈ ಪ್ರಕರಣದ ಸಂತ್ರಸ್ತೆಯಿಂದ ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿಕೊಂಡಿದೆ. ಅಲ್ಲದೆ ಕೃತ್ಯ ನಡೆದ ಸ್ಥಳಗಳು ಎನ್ನಲಾದ ಹೊಳೆನರಸೀಪುರ ಹಾಗೂ ಬೆಂಗಳೂರಿನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರ್‌ ಪ್ರಕ್ರಿಯೆಯನ್ನು ಕೂಡ ಅಧಿಕಾರಿಗಳು ಮುಗಿಸಿದ್ದಾರೆ. ಹಾಗೆಯೇ ಆರೋಪಿ ರೇವಣ್ಣ ಸೇರಿದಂತೆ ಕೆಲವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ಎಸ್ಐಟಿ ಪಡೆದಿದೆ ಎಂದು ಗೊತ್ತಾಗಿದೆ.

ಈ ಪ್ರಕರಣದ ಸಂಬಂಧ ವಿಧಿ ವಿಜ್ಞಾನಪ್ರಯೋಗಾಲಯ (ಎಫ್‌ಎಸ್‌ಎಲ್‌)ದ ವರದಿಗೆ ಎಸ್ಐಟಿ ನಿರೀಕ್ಷಿಸುತ್ತಿದೆ. ತ್ವರಿತವಾಗಿ ವರದಿ ನೀಡುವಂತೆ ಸಹ ತನಿಖಾಧಿಕಾರಿಗಳು ಕೋರಿದ್ದಾರೆ. ಈಗಿನ ಯೋಜನೆಯಂತೆ ನಡೆದರೆ ಮೇ ತಿಂಗಳಾಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಆರೋಪ ಪಟ್ಟಿ ಏಕೆ? ಕಾರಣಗಳು ಹೀಗಿವೆ:

1.ವಿದೇಶದಲ್ಲಿ ನೆಲೆಸಿರುವ ಆರೋಪಿಗಳ ಪತ್ತೆಗೆ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಲು ಚಾರ್ಜ್‌ಶೀಟ್‌ ಮುಖ್ಯವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಳೀಯ ಠಾಣೆಗಳಲ್ಲಿ ದಾಖಲಾಗುವ ಎಫ್‌ಐಆರ್‌ಗಳಿಗೆ ಮಾನ್ಯತೆ ಸಿಗುವುದಿಲ್ಲ. ಹಾಗಾಗಿ ಆರೋಪಿಗಳ ವಿರುದ್ಧ ಸಲ್ಲಿಕೆಯಾಗುವ ಆರೋಪಪಟ್ಟಿಯನ್ನು ಆಯಾ ದೇಶದ ಭಾಷೆಗೆ ತರ್ಜುಮೆಗೊಳಿಸಿ ರೆಡ್‌ ಕಾರ್ನರ್‌ ನೋಟಿಸ್‌ಗೆ ಕೋರಿಕೆ ಸಲ್ಲಿಸಬೇಕು. ಈಗ ವಿದೇಶದಲ್ಲಿರುವ ಪ್ರಜ್ವಲ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಲು ಅವರ ತಂದೆ ಮೇಲಿನ ಲೈಂಗಿಕ ಪ್ರಕರಣದ ತನಿಖೆಯನ್ನು ಎಸ್‌ಐಟಿ ಪೂರ್ಣಗೊಳಿಸುವ ಸಾಧ್ಯತೆಗಳಿವೆ.

2.ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಮುನ್ನ ಆರೋಪಿ ಯಾವ ದೇಶದಲ್ಲಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಎಸ್‌ಐಟಿ ಪತ್ತೆ ಹಚ್ಚಬೇಕಿದೆ. ಆರೋಪಿಯ ನಿಖರ ಲೋಕೇಷನ್‌ ಅನ್ನು ಸಂಬಂಧಪಟ್ಟ ದೇಶದ ಜತೆಗೆ ಹಂಚಿಕೊಳ್ಳಬೇಕಿದೆ.

3.ರೆಡ್ ಕಾರ್ನರ್ ನೋಟಿಸ್‌ ಜಾರಿಯಾದರೆ ಆರೋಪಿಗೆ ಬಂಧನ ಭೀತಿ ಹೆಚ್ಚಾಗಲಿದೆ. ಆಗ ಆತನ ಹಣಕಾಸು ಮೂಲಗಳಿಗೆ ಸಹ ತೊಂದರೆಯಾಗಬಹುದು.

4.ರೆಡ್‌ ಕಾರ್ನರ್ ಮಾತ್ರವಲ್ಲದೆ ಪಾಸ್ ಪೋರ್ಟ್‌ ರದ್ದುಗೊಳಿಸುವ ಸಾಧ್ಯತೆ ಬಗ್ಗೆ ತಜ್ಞರ ಜತೆ ಎಸ್ಐಟಿ ಅಧಿಕಾರಿಗಳು ಚರ್ಚಿಸಿದ್ದಾರೆ. ಸದ್ಯ ಸಂಸದರಾಗಿರುವ ಕಾರಣಕ್ಕೆ ಪ್ರಜ್ವಲ್‌ ಅವರು ರಾಜತಾಂತ್ರಿಕ ಪಾಸ್‌ ಪೋರ್ಟ್ ಬಳಸಿ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಅವರ ಸಂಸತ್‌ ಸದಸ್ಯತ್ವದ ಅ‍ವಧಿ ಜೂ.4ಕ್ಕೆ ಅಂತ್ಯವಾಗಲಿದೆ. ಅದರೊಂದಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ಅವಧಿ ಸಹ ಮುಕ್ತಾಯವಾಗಲಿದೆ. ಆದರೆ ಅವರು ಮತ್ತೆ ಗೆದ್ದರೆ ಮುಂದೇನು ಎಂಬುದು ಖಚಿತವಾಗಿಲ್ಲ.

5. ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಪ್ರಜ್ವಲ್‌ ಅವರ ಪಾಸ್‌ ಪೋರ್ಟ್‌ ರದ್ದತಿಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿದೆ.