ಲೆಕ್ಕ ಕೊಡದ ಇನ್‌ಸ್ಪೆಕ್ಟರ್ಸ್‌ ವೇತನಕ್ಕೆ ತಡೆ!

| Published : Feb 04 2024, 01:34 AM IST / Updated: Feb 04 2024, 03:00 PM IST

ಸಾರಾಂಶ

ವರ್ಗಾವಣೆಗೊಂಡ ಬಳಿಕ ಕರ್ತವ್ಯದಿಂದ ಬಿಡುಗಡೆ ಮುನ್ನ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಸ್ತುಗಳ ಕುರಿತು ಲೆಕ್ಕ ಒಪ್ಪಿಸಿ ಹಿರಿಯ ಅಧಿಕಾರಿಗಳಿಂದ ಎನ್‌ಒಸಿ ಪಡೆಯದ ಎಸಿಪಿ ಸೇರಿದಂತೆ ಪೊಲೀಸರ ವೇತನವನ್ನು ತಡೆ ಹಿಡಿಯುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು

ವರ್ಗಾವಣೆಗೊಂಡ ಬಳಿಕ ಕರ್ತವ್ಯದಿಂದ ಬಿಡುಗಡೆ ಮುನ್ನ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಸ್ತುಗಳ ಕುರಿತು ಲೆಕ್ಕ ಒಪ್ಪಿಸಿ ಹಿರಿಯ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯದ ಸಹಾಯಕ ಆಯುಕ್ತ (ಎಸಿಪಿ) ಸೇರಿದಂತೆ ಪೊಲೀಸರ ವೇತನವನ್ನು ತಡೆ ಹಿಡಿಯುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ವರ್ಗಾವಣೆಗೊಂಡ ಬಳಿಕ ಹೊಸದಾಗಿ ಬರುವ ಅಧಿಕಾರಿಗೆ ಅಪರಾಧ ಪ್ರಕರಣಗಳ ದಾಖಲೆ ಹಾಗೂ ಜಪ್ತಿ ವಸ್ತುಗಳ ಮಾಹಿತಿ ನೀಡದೆ ಕೆಲವರು ನಿರ್ಲಕ್ಷ್ಯತನ ತೋರುತ್ತಿದ್ದರು. 

ಇದರಿಂದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣ ಹಾಗೂ ಹಣ ಸಂಬಂಧ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದವು. 

ಅಲ್ಲದೆ ವರ್ಗವಾದ ಕೂಡಲೇ ಕೆಲವರು ತಮಗೆ ಇಲಾಖೆ ನೀಡಿದ ವಾಕಿಟಾಕಿ ಹಾಗೂ ಪಿಸ್ತೂಲನ್ನು ಸಹ ಇಲಾಖೆಗೆ ಮರಳಿಸದೆ ತೆರಳಿದ್ದರು. ಈ ಕರ್ತವ್ಯಲೋಪವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಈಗ ಎನ್‌ಓಸಿ ನಿಯಮ ಜಾರಿಗೊಳಿಸಿದ್ದಾರೆ.

ತಾವು ತನಿಖೆ ನಡೆಸಿದ ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ ಹಣ ಮತ್ತು ಚಿನ್ನಾಭರಣ ಸೇರಿ ಇತರೆ ವಸ್ತುಗಳ ಲೆಕ್ಕ, ಇಲಾಖೆಯಿಂದ ಪಡೆದ ಪಿಸ್ತೂಲ್‌, ವಾಕಿಟಾಕಿ ಹಾಗೂ ಸೇವಾ ವರದಿ ಪುಸಕ್ತದಲ್ಲಿ ದಾಖಲು (ಎಸಿಎಸ್‌ಆರ್‌) ಕುರಿತು ಹಿರಿಯ ಅಧಿಕಾರಿಗಳಿಂದ ಎನ್‌ಒಸಿ ಪಡೆಯಬೇಕು. 

ಈ ಎನ್‌ಒಸಿ ಪಡೆಯದ ಪೊಲೀಸರು ಹೊಸ ಹುದ್ದೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರೂ ಸಹ ಮಾಸಿಕ ವೇತನವನ್ನು ಬಿಡುಗಡೆಗೊಳಿಸದಂತೆ ಆಯುಕ್ತರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಅಲ್ಲದೆ ಹೊಸ ಹುದ್ದೆಯಲ್ಲಿ ಅಧಿಕಾರ ಸ್ವೀಕಾರಕ್ಕೂ ಮುನ್ನ ಹೂಗುಚ್ಛ ಹಿಡಿದು ತಮ್ಮ ಭೇಟಿಗೆ ಬರುವ ಅಧಿಕಾರಿಗಳಿಗೆ ಮೊದಲು ಎನ್‌ಒಸಿ ತೋರಿಸುವಂತೆ ಆಯುಕ್ತರು ಕೇಳುತ್ತಿದ್ದಾರೆ. 

ಹೀಗಾಗಿ ಆಯುಕ್ತರ ಕಚೇರಿ ಮೆಟ್ಟಿಲೇರುವ ಮುನ್ನ ಪೊಲೀಸರಿಗೆ ಎನ್‌ಒಸಿ ಕಡ್ಡಾಯವಾಗಿದೆ. ಈ ಆದೇಶ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಎಸಿಪಿ, ಪಿಐ ಹಾಗೂ ಪಿಎಸ್‌ಐಗಳು ಈಗ ತಮ್ಮ ಸೇವಾವಧಿಯ ಲೆಕ್ಕವನ್ನು ಚಾಚುತಪ್ಪದೆ ಇಲಾಖೆಗೆ ಸಲ್ಲಿಸಿ ಎನ್‌ಒಸಿ ಪಡೆಯುತ್ತಿದ್ದಾರೆ.

ಎನ್‌ಒಸಿ ಕಡ್ಡಾಯ ನಿಯಮವೇಕೆ?
ವರ್ಗಾವಣೆಗೊಂಡ ಬಳಿಕ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅವಸರದಲ್ಲಿ ಕೆಲವು ಪಿಐ ಹಾಗೂ ಎಸಿಪಿಗಳು, ಮುದ್ದೆ ಮಾಲ್‌ (ಜಪ್ತಿಯಾದ ವಸ್ತುಗಳ ಲೆಕ್ಕ) ಹಾಗೂ ಅಪರಾಧ ಪ್ರಕರಣಗಳ ದಾಖಲೆಗಳು ಸೇರಿದಂತೆ ಇತರೆ ವಿಚಾರಗಳ ಕುರಿತು ಮಾಹಿತಿ ನೀಡದೆ ತೆರಳುತ್ತಿದ್ದರು. ಅಲ್ಲದೆ ಸೇವಾ ವರದಿ ದಾಖಲು ಪುಸಕ್ತ (ಸರ್ವೀಸ್ ರೆಕಾರ್ಡ್‌ ಬುಕ್)ವನ್ನು ಸಹ ಅಧಿಕಾರಿಗಳು ನಿರ್ವಹಿಸುತ್ತಿರಲಿಲ್ಲ.

ನಗರ ಪೊಲೀಸ್ ಠಾಣೆಗಳ ಪರಿವೀಕ್ಷಣೆ ವೇಳೆಯಲ್ಲಿ ಹಳೇ ಪ್ರಕರಣಗಳ ಕಡತಗಳನ್ನು ಪರಿಶೀಲಿಸಿದಾಗ ಆಯುಕ್ತ ದಯಾನಂದ್ ಅವರಿಗೆ ಅಧಿಕಾರಿಗಳ ಈ ಲೋಪಗಳು ಪತ್ತೆಯಾಗಿದ್ದವು. 

ಅಲ್ಲದೆ ಎಷ್ಟೋ ಹಳೇ ಪ್ರಕರಣಗಳಲ್ಲಿ ಜಪ್ತಿಯಾದ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಇತರೆ ವಸ್ತುಗಳು ನಾಪತ್ತೆ ಆಗಿರುವುದು ಸಹ ಆಯುಕ್ತರ ಗಮನಕ್ಕೆ ಬಂದಿತು. 

ಈ ಕರ್ತವ್ಯಲೋಪವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಅಧಿಕಾರಿಗಳಿಗೆ ವರ್ಗಾವಣೆ ಬಳಿಕ ಎನ್‌ಒಸಿ ಪಡೆಯುವಂತೆ ನಿಯಮವನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ.

ಈಗ ವರ್ಗಾವಣೆಗೊಂಡ ಪೊಲೀಸರು, ತಮ್ಮ ಹಿರಿಯ ಅಧಿಕಾರಿಗಳಿಗೆ ಮುದ್ದೆ ಮಾಲ್‌, ಅಪರಾಧ ಪ್ರಕರಣಗಳ ದಾಖಲೆಗಳು, ಪಿಸ್ತೂಲ್‌ ಹಾಗೂ ವಾಕಿಟಾಕಿ ಎಲ್ಲದರ ಮಾಹಿತಿ ನೀಡಿ ಎನ್‌ಒಸಿ ಪಡೆದು ಆಯಾ ಡಿಸಿಪಿ ಕಚೇರಿಗೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

₹75 ಲಕ್ಷದ ತಪ್ಪಿದ ಲೆಕ್ಕ: ಈ ಹಿಂದೆ ಬ್ಯಾಟರಾಯನಪುರ ಠಾಣೆಯಲ್ಲಿ ಕರ್ತವ್ಯನಿರ್ವಹಿಸಿದ್ದ ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಪ್ತಿ ಮಾಡಿದ ₹75 ಲಕ್ಷ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. 

ಬ್ಯಾಟರಾಯನಪುರ ಠಾಣೆಯಿಂದ ವರ್ಗಾವಣೆಗೊಂಡಾಗ ಹಳೇ ಪ್ರಕರಣದಲ್ಲಿ ಜಪ್ತಿ ಮಾಡಿದ ಹಣದ ಕುರಿತು ಲೆಕ್ಕ ನೀಡದೆ ಶಂಕರ್ ನಾಯಕ್ ತೆರಳಿದ್ದರು. 

ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಚರ್ಚೆಗ್ರಾಸವಾಗಿ ಇಲಾಖೆಗೆ ಮುಜುಗರ ತಂದಿತ್ತು. ಈ ಹಿನ್ನೆಲೆಯಲ್ಲಿ ಈಗ ಆಯುಕ್ತರು, ಜಪ್ತಿ ಮಾಡಿದ ವಸ್ತುಗಳ ಲೆಕ್ಕ ನೀಡಿ ಕರ್ತವ್ಯದಿಂದ ಬಿಡುಗಡೆ ಆಗುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರ್ಗಾವಣೆಗೊಂಡ ಕೆಲವರು ನಿಯಮಾನುಸಾರ ಕರ್ತವ್ಯದಿಂದ ಬಿಡುಗಡೆ ಆಗುತ್ತಿರಲಿಲ್ಲ. ಅಪರಾಧ ಪ್ರಕರಣಗಳ ಕಡತಗಳ ಹಾಗೂ ಜಪ್ತಿ ವಸ್ತುಗಳ ನಿರ್ವಹಣೆಯಲ್ಲಿ ಸಹ ಅಧಿಕಾರಿಗಳ ಲೋಪಗಳು ಕಂಡು ಬಂದಿತು. 

ಈ ಹಿನ್ನೆಲೆಯಲ್ಲಿ ಸೇವಾವಧಿ ಕುರಿತು ಸೂಕ್ತ ಮಾಹಿತಿ ಹಾಗೂ ತಮ್ಮ ಸುಪರ್ದಿಯಲ್ಲಿದ್ದ ವಸ್ತುಗಳನ್ನು ಕಾನೂನು ಪ್ರಕಾರ ಹಸ್ತಾಂತರ ಮಾಡಿ ಎನ್‌ಒಸಿ ಪಡೆಯುವಂತೆ ನಿಯಮ ಜಾರಿಗೊಳಿಸಲಾಗಿದೆ. -ಬಿ.ದಯಾನಂದ್‌, ನಗರ ಪೊಲೀಸ್ ಆಯುಕ್ತ.