ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ನಾಪತ್ತೆ ನಾಟಕ: ತಾಯಿಗೆ ಹೈಕೋರ್ಟಿಂದ 2 ಲಕ್ಷ ದಂಡ!

| Published : Sep 06 2025, 02:00 AM IST

ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ನಾಪತ್ತೆ ನಾಟಕ: ತಾಯಿಗೆ ಹೈಕೋರ್ಟಿಂದ 2 ಲಕ್ಷ ದಂಡ!
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಆವರಣದಲ್ಲೇ ಗಾಂಜಾ ಬೆಳೆದು, ತಡರಾತ್ರಿವರೆಗೂ ಪಾರ್ಟಿ ನಡೆಸುವ ನೆರೆಮನೆಯವರ ವಿರುದ್ಧ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಲಿಲ್ಲ. ಇದರಿಂದ ಸಿಟ್ಟಿಗೆದ್ದು ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೇಬಿಯಸ್‌ ಕಾರ್ಪಸ್‌ ಅವಕಾಶ ಬಳಸಿಕೊಂಡು ಪುತ್ರ ನಾಪತ್ತೆ ನಾಟಕವಾಡಿದ ವೃದ್ದೆಯೊಬ್ಬರಿಗೆ ಹೈಕೋರ್ಟ್‌ ಎರಡು ಲಕ್ಷ ರು. ದಂಡ ವಿಧಿಸಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಆವರಣದಲ್ಲೇ ಗಾಂಜಾ ಬೆಳೆದು, ತಡರಾತ್ರಿವರೆಗೂ ಪಾರ್ಟಿ ನಡೆಸುವ ನೆರೆಮನೆಯವರ ವಿರುದ್ಧ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಲಿಲ್ಲ. ಇದರಿಂದ ಸಿಟ್ಟಿಗೆದ್ದು ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೇಬಿಯಸ್‌ ಕಾರ್ಪಸ್‌ ಅವಕಾಶ ಬಳಸಿಕೊಂಡು ಪುತ್ರ ನಾಪತ್ತೆ ನಾಟಕವಾಡಿದ ವೃದ್ದೆಯೊಬ್ಬರಿಗೆ ಹೈಕೋರ್ಟ್‌ ಎರಡು ಲಕ್ಷ ರು. ದಂಡ ವಿಧಿಸಿದೆ.

ಮಗ ನಿಗೂಢವಾಗಿ ನಾಪತ್ತೆಯಾಗಿದ್ದು, ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಇಂದಿರಾನಗರದ ನಿವಾಸಿ ಎಂ.ಮಹೇಶ್ವರಿ (72) ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನಿರ್ದೇಶನದಂತೆ ಹುಡುಕಾಟ ನಡೆಸಿದ್ದ ಪೊಲೀಸರು ಅರ್ಜಿದಾರೆಯ ಪುತ್ರ ಕೃಪಲಾನಿಯನ್ನು ಪತ್ತೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಜೊತೆಗೆ, ಕೃಪಲಾನಿ ನಾಪತ್ತೆಯಾಗಿಲ್ಲ. ಯಾರಿಂದಲೂ ಬಂಧನಕ್ಕೂ ಒಳಗಾಗಿಲ್ಲ. ತಾನೇ ಚೆನ್ನೈನಲ್ಲಿ ಬಚ್ಚಿಟ್ಟುಕೊಂಡು ನಾಪತ್ತೆ ನಾಟಕವಾಡಿದ್ದಾನೆ ಎಂದು ವರದಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರೆಯ ಪುತ್ರ ಕೃಪಲಾನಿ ತನ್ನ ನೆರೆಮನೆಯವರು ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದಾರೆ. ತಡರಾತ್ರಿ ಪಾರ್ಟಿ ನಡೆಸಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿ ಹಿಂಬರಹ ನೀಡಿದ್ದರು. ಆದರೆ, ತನ್ನ ದೂರಿನನ್ವಯ ಕೇಸ್‌ ದಾಖಲಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಕೃಪಲಾನಿ ಚೆನ್ನೈಗೆ ತೆರಳಿ ಹೋಟೆಲ್‌ನಲ್ಲಿ ತಂಗಿದ್ದ. ನಂತರ ತಾಯಿ ಮೂಲಕ ಹೈಕೋರ್ಟ್‌ಗೆ ಈ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿರುವುದು ಪೊಲೀಸರ ವರದಿಯಿಂದ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಕೃಪಲಾನಿ ಅಕ್ರಮ ಬಂಧನಕ್ಕೆ ಒಳಗಾಗಿರಲಿಲ್ಲ. ಈ ಅರ್ಜಿ ದಾಖಲಾದಾಗ ತಾಯಿ, ಸಹೋದರಿ, ಸ್ನೇಹಿತನೊಂದಿಗೆ ನಿರಂತರ ಸಮಪರ್ಕದಲ್ಲಿದ್ದ. ದುರುದ್ದೇಶಪೂರಿತವಾಗಿ ಹೈಕೊರ್ಟ್‌ಗೆ ಈ ಅರ್ಜಿ ದಾಖಲಿಸಲಾಗಿದೆ. ಇಂತಹ ನಿಷ್ಪ್ರಯೋಜಕ ಮತ್ತು ದುರುದ್ದೇಶಪೂರಿತ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಮೊಟಕುಗೊಳಿಸಬೇಕು. ನ್ಯಾಯಾಂಗ ಪ್ರಕ್ರಿಯೆ ರಕ್ಷಿಸಲು ಅರ್ಜಿದಾರರಿಗೆ ದಂಡ ವಿಧಿಸುವುದು ಅವಶ್ಯಕ ಎಂದು ಪೀಠ ಕಟುವಾಗಿ ನುಡಿದಿದೆ.

ಅಲ್ಲದೆ, ಅಶುದ್ಧ ಕೈಗಳಿಂದ ಮತ್ತು ಸತ್ಯಾಂಶ ಮರೆಮಾಚಿ ಅರ್ಜಿ ಸಲ್ಲಿಸಿರುವುದರಿಂದ ಅರ್ಜಿದಾರೆಗೆ ಎರಡು ಲಕ್ಷ ರು. ದಂಡ ವಿಧಿಸಲಾಗುತ್ತಿದೆ. ಎರಡು ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಪೊಲೀಸ್‌ ಕಲ್ಯಾಣ ನಿಧಿಗೆ ತಲಾ ಒಂದು ಲಕ್ಷ ರು. ಪಾವತಿಸಬೇಕು ಎಂದು ಪೀಠ ಅರ್ಜಿದಾರರಿಗೆ ನಿರ್ದೇಶಿಸಿದೆ. ಹಾಗೆಯೇ, ದಂಡ ಮೊತ್ತ ಪಾವತಿಸದಿದ್ದರೆ ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿದೆ.

ಪ್ರಕರಣವೇನು?:

ಮಹೇಶ್ವರಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ತನ್ನ ಪುತ್ರ ಎಂ.ಕೃಪಲಾನಿ 2025ರ ಜೂ.7ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಆತನ ಸುಳಿವು ಸಿಗಲಿಲ್ಲ. ಹಾಗಾಗಿ ಪುತ್ರನನ್ನು ಹುಡುಕಿ ಕೋರ್ಟ್‌ಗೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಆದೇಶಿಸುವಂತೆ ಕೋರಿದ್ದರು. ಹೈಕೋರ್ಟ್‌ ಸೂಚನೆ ಮೇರೆಗೆ ಹುಡುಕಾಟ ನಡೆಸಿದ್ದ ಪೊಲೀಸರು, ಕಾಲ್‌ ರೆಕಾರ್ಡ್‌ ಆಧಾರದಲ್ಲಿ 2025ರ ಆ.5ರಂದು ಚೆನ್ನೈ ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ಕೃಪಲಾನಿಯನ್ನು ಪತ್ತೆ ಮಾಡಿ, ಹೈಕೋರ್ಟ್‌ಗೆ ಹಾಜರುಪಡಿಸಿದ್ದರು.

ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ವಿಜಯಕುಮಾರ್‌ ಮಜಗೆ ಮತ್ತು ಸರ್ಕಾರಿ ಪ್ಲೀಡರ್‌ ಪಿ.ತೇಜೇಸ್‌ ಹೈಕೋರ್ಟ್‌ಗೆ ವರದಿ ಸಲ್ಲಿಸಿ ಕೃಪಲಾನಿ ನಾಟಕ ಬಹಿರಂಗಪಡಿಸಿದರು. ಜೊತೆಗೆ, ಚೆನ್ನೈ ಮ್ಯಾರಿಯೇಟ್‌ ಹೊಟೇಲ್‌ನಲ್ಲಿ ಕೃಪಲಾನಿ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಿದ ವಿಚಾರವನ್ನೂ ತಿಳಿಸಿದರು.