ಸಾರಾಂಶ
ಬೆಂಗಳೂರು : ಪಿತೃಪಕ್ಷದ ಪೂಜೆ ಹಿನ್ನೆಲೆಯಲ್ಲಿ ಮದ್ಯದ ಪಾರ್ಟಿ ಮಾಡುವಾಗ ಕಾಲು ತುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೊಣ್ಣೇನಹಳ್ಳಿ ನಿವಾಸಿ ಮೂರ್ತಿ(52) ಕೊಲೆಯಾದ ದುರ್ದೈವಿ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕೊಲೆ ಸಂಬಂಧ ಸೊಣ್ಣೇನಹಳ್ಳಿ ನಿವಾಸಿ ಕೀರ್ತಿ (27) ಎಂಬಾತನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಮೂರ್ತಿ ಮತ್ತು ಆರೋಪಿ ಕೀರ್ತಿ ನೆರೆಹೊರೆಯವರು. ಮೂರ್ತಿ ಹಸು ಸಾಕುವ ಕೆಲಸ ಮಾಡಿದರೆ, ಕೀರ್ತಿ ಹಣಕಾಸು ವ್ಯವಹಾರ ನಡೆಸುತ್ತಿದ್ದ. ಮೂರ್ತಿ ಅವರ ಸಹೋದರನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಇದ್ದಿದ್ದರಿಂದ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ಊಟಕ್ಕೂ ಮುನ್ನ ಮೂರ್ತಿ ಸೇರಿದಂತೆ ಹಬ್ಬಕ್ಕೆ ಬಂದಿದ್ದವರು ಮದ್ಯದ ಪಾರ್ಟಿ ಮಾಡುತ್ತಿದ್ದರು.
ಕಾಲು ತುಳಿದಿದ್ದಕ್ಕೆ ಕೊಲೆ:
ಈ ವೇಳೆ ಮದ್ಯದ ಅಮಲಿನಲ್ಲಿ ಮೂರ್ತಿ, ಆರೋಪಿ ಕೀರ್ತಿಯ ಕಾಲು ತುಳಿದಿದ್ದಾರೆ. ಇದರಿಂದ ಕೋಪಗೊಂಡ ಕೀರ್ತಿ, ಮೂರ್ತಿ ಜತೆಗೆ ಜಗಳ ತೆಗೆದು ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ಕೀರ್ತಿ, ಏಕಾಏಕಿ ಚಾಕು ತೆಗೆದು ಮೂರ್ತಿಯ ಹೊಟ್ಟೆಗೆ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ಮೂರ್ತಿಯನ್ನು ಕುಟುಂಬದ ಸದಸ್ಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ಮಾರ್ಗ ಮಧ್ಯೆಯೇ ಮೂರ್ತಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಜ್ಞಾನಭಾರತಿ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೀರ್ತಿಯನ್ನು ಬಂಧಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.