ಮೆಟ್ರೋಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

| Published : Mar 22 2024, 02:15 AM IST / Updated: Mar 22 2024, 08:12 AM IST

Namma Metro
ಮೆಟ್ರೋಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿ ಹಳಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ರೈಲು ಬರುವಾಗ ಹಳಿಗೆ ಜಿಗಿದು ಕಾನೂನು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ.

ಮುಂಬೈ ಮೂಲದ ಧ್ರುವ್‌ ಜತ್ತಿನ್‌ ಥಕ್ಕರ್‌(19) ಮೃತ ವಿದ್ಯಾರ್ಥಿ. ಗುರುವಾರ ಮಧ್ಯಾಹ್ನ 2.10ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಆತ್ಮಹತ್ಯೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. 

ಈ ಬಗ್ಗೆ ಮುಂಬೈನಲ್ಲಿರುವ ಮೃತನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತನ ಪೋಷಕರು ನಗರಕ್ಕೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?
ಮುಂಬೈ ಮೂಲದ ಮೃತ ಧ್ರುವ್‌ ನಗರದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಬಿ.ಎ.ಎಲ್‌.ಎಲ್‌.ಬಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. 

ಕ್ಯಾಂಪಸ್‌ನಲ್ಲೇ ಇರುವ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಹೊರಗೆ ಹೋಗಿ ಬರುವುದಾಗಿ ಸ್ನೇಹಿತರಿಗೆ ಹೇಳಿ ಹಾಸ್ಟೆಲ್‌ನಿಂದ ಹೊರಗೆ ಬಂದಿದ್ದ ಎಂದು ತಿಳಿದು ಬಂದಿದೆ.ದೇಹದಿಂದ ಬೇರ್ಪಟ್ಟ ರುಂಡ

ಬಿಎಂಟಿಸಿ ಬಸ್‌ನಲ್ಲಿ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣಕ್ಕೆ ಬಂದಿರುವ ಧ್ರುವ್‌, ಐದಾರು ನಿಮಿಷ ನಿಲ್ದಾಣದಲ್ಲಿ ಓಡಾಡಿದ್ದಾನೆ. ಬಳಿಕ ಪ್ರಯಾಣಿಕನಂತೆ ರೈಲು ಹತ್ತಲು ಪ್ಲಾಟ್‌ ಫಾರ್ಮ್‌ನಲ್ಲಿ ನಿಂತಿದ್ದಾನೆ. 

ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ತೆರಳುವ ಮೆಟ್ರೋ ರೈಲು ಮಧ್ಯಾಹ್ನ 2.10ಕ್ಕೆ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಧ್ರುವ್‌ ಏಕಾಏಕಿ ಹಳಿಗೆ ಜಿಗಿದು ಹಳಿ ಮೇಲೆ ತಲೆ ಇರಿಸಿದ್ದಾನೆ. 

ಕೆಲವೇ ಸೆಕೆಂಡ್‌ಗಳಲ್ಲಿ ರೈಲಿನ ಚಕ್ರಗಳು ಆತನ ಕುತ್ತಿಗೆ ಮೇಲೆ ಹರಿದ ಪರಿಣಾಮ ಆತನ ರುಂಡ ಮತ್ತು ಮುಂಡ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುಮಾರು ಏಳೆಂಟು ಅಡಿ ರೈಲು ಮುಂದೆ ಎಳೆದುಕೊಂಡು ಹೋಗಿದೆ ಎಂದು ತಿಳಿದು ಬಂದಿದೆ.ಹಳಿಯ ವಿದ್ಯುತ್‌ ಸಂಪರ್ಕ ಕಡಿತ

ತಕ್ಷಣ ಲೋಕೋ ಪೈಲೆಟ್‌ ಮೆಟ್ರೋ ರೈಲು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಪ್ರಯಾಣಿಕರು ಹಾಗೂ ನಿಲ್ದಾಣದ ಸಿಬ್ಬಂದಿ ಓಡಿ ಬಂದು ನೋಡಿದಾಗ ರೈಲಿನ ಕೆಳಗೆ ವ್ಯಕ್ತಿಯ ರುಂಡ ಮತ್ತು ಮುಂಡ ಬಿದ್ದಿರುವುದು ಕಂಡು ಬಂದಿದೆ. 

ಕೂಡಲೇ ರೈಲು ಹಳಿಯ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಂದ್ರಾಲೇಔಟ್‌ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ರೈಲಿನ ಅಡಿ ಸಿಲುಕಿದ್ದ ಮೃತದೇಹ ಹೊರಗೆ ತೆಗೆಯಲು ಪೊಲೀಸರು ಹರಸಾಹಸಪಟ್ಟರು. 

ಬಳಿಕ ರೈಲನ್ನು ಹಿಮ್ಮುಖವಾಗಿ ಸ್ವಲ್ಪ ದೂರ ಚಲಾಯಿಸಿ ಹಳಿ ಮೇಲೆ ಬಿದ್ದಿದ್ದ ಧೃವ್‌ನ ಮೃತದೇಹವನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದರು.

ಧ್ರುವ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳ ಅಥವಾ ಹಾಸ್ಟೆಲ್‌ನಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಆತ ಓದಿನಲ್ಲಿ ಮುಂದಿದ್ದ. ಉತ್ತಮ ನಡತೆ ಹೊಂದಿದ್ದ ಎಂದು ಅಧ್ಯಾಪಕರು ತಿಳಿಸಿದ್ದಾರೆ. 

ಈ ಘಟನೆ ಸಂಬಂಧ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಖಿನ್ನತೆ ಕಾರಣವಾ?
ಮೃತ ಧ್ರುವ್‌ ಕಳೆದ ಏಳು ತಿಂಗಳ ಹಿಂದೆಯಷ್ಟೇ ಮುಂಬೈನಿಂದ ಬೆಂಗಳೂರಿಗೆ ಬಂದು ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಓದಿನಲ್ಲಿ ಮುಂದಿದ್ದರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. 

ಸ್ನೇಹಿತರೊಂದಿಗಿನ ಮನಸ್ತಾಪ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯಲ್ಲಿ ಧೃವ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

ಸ್ನೇಹಿತರು ಪರಾರಿ?
ಬಿಎಂಟಿಸಿ ಬಸ್‌ನಲ್ಲಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಧ್ರುವ್‌ ಬಳಿಕ ಒಬ್ಬ ಯುವಕ ಮತ್ತು ಯುವತಿ ಜತೆಗೆ ರೈಲು ನಿಲ್ದಾಣ ಪ್ರವೇಶಿಸಿದ್ದ ಎನ್ನಲಾಗಿದೆ. 

ಧ್ರುವ್‌ ಮೊಬೈಲ್‌ನಲ್ಲಿ ಮಾತನಾಡುತ್ತಾ ಏಕಾಏಕಿ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆ ಯುವಕ-ಯುವತಿ ಗಾಬರಿಗೊಂಡು ನಿಲ್ದಾಣದಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ.