ಸಾರಾಂಶ
ಸೌಲಭ್ಯ ನೀಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ವಿಶ್ವ ವಿದ್ಯಾಲಯದ ಕುಲ ಸಚಿವ ಶೇಕ್ ಲತೀಫ್ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತವು, ವಿದ್ಯಾರ್ಥಿ ವಿರೋಧಿ ನಿಲುವು ಅನುಸರಿಸುತ್ತಿದೆ. ಸರ್ವಾಧಿಕಾರಿ ಧೋರಣೆ ತಳೆದಿರುವ ಕುಲಸಚಿವರನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ವಿವಿಯ ನೂರಾರು ವಿದ್ಯಾರ್ಥಿಗಳು ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸೆಂಟ್ರಲ್ ಕಾಲೇಜಿನ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯುತ್ತಿದ್ದ ಸಿಂಡಿಕೇಟ್ ಸಭೆಗೆ ಸ್ನಾತಕೋತ್ತರ ಮತ್ತು ಸಂಶೋಧನಾರ್ಥಿಗಳ ಒಕ್ಕೂಟದ ಅನೇಕ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಲ್ಲ, ನಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಆಡಳಿತ ವಿಫಲವಾಗಿದೆ. ಈ ವೈಫಲ್ಯಕ್ಕೆ ಮೂಲ ಕಾರಣರಾಗಿರುವ ಕುಲಸಚಿವ ಶೇಖ್ ಲತೀಫ್ ಅವರನ್ನು ಕೂಡಲೇ ವಿವಿಯಿಂದ ವರ್ಗಾವಣೆ ಮಾಡಬೇಕು ಇಲ್ಲವೇ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
2023-24ನೇ ಸಾಲಿನಲ್ಲಿ ದಾಖಲಾದ ಸಂಶೋಧನಾ ವಿದ್ಯಾರ್ಥಿಗಳಿಗೆ ಕೂಡಲೇ ಲ್ಯಾಪ್ ಟಾಪ್ ವಿತರಿಸಬೇಕು. ಹಾಸ್ಟೆಲ್‌ಗಳಿಗೆ ಹಾಸಿಗೆ ದಿಂಬು, ಸ್ಟಡಿ ಟೇಬಲ್, ಖುರ್ಚಿ ಮತ್ತಿತರ ಪೀಠೋಪಕರಣ, ಮೂಲ ಸೌಕರ್ಯ ಪೂರೈಸಬೇಕು. ಅಪಘಾತ ತಡೆ ಹಾಗೂ ಕ್ಯಾಂಪಸ್ ಭದ್ರತೆ ದೃಷ್ಟಿಯಿಂದ ಜ್ಞಾನಭಾರತಿಯ ಮುಖ್ಯ ರಸ್ತೆಗಳ ಸಂಚಾರ ಬಂದ್ ಮಾಡಿ ಸ್ಥಳೀಯರಿಗೆ ಪರ್ಯಾಯ ರಸ್ತೆ ಸೌಲಭ್ಯ ಕಲ್ಪಿಸಲು ಸರ್ಕಾರದೊಂದಿಗೆ ವಿವಿಯ ಆಡಳಿತ ಮಾತುಕತೆ ನಡೆಸಬೇಕು. ಹಾಸ್ಟೆಲ್ ಗಳಿಗೆ ಕೀಟನಾಶ ಔಷಧಿ ಸಿಂಪಡಿಸಬೇಕು. ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಮತ್ತು ಡಿಸ್ಪೋಸೆಬಲ್ ಮಶಿನ್ ವಿತರಣೆ ಮಾಡಬೇಕು. ಡಾ। ಅಂಬೇಡ್ಕರ್ ಕೇಂದ್ರ ಗ್ರಂಥಾಲಯವನ್ನು 24/7 ಪರೀಕ್ಷಾ ಪೂರ್ವಭಾವಿ ತಯಾರಿ ಗ್ರಂಥಾಲಯವನ್ನಾಗಿಸಬೇಕು. ಹಾಸ್ಟೆಲ್ ರಸ್ತೆ ದುರಸ್ತಿ, ಬೀದಿ ದೀಪ ಅಳವಡಿಕೆ, ನಾಮಫಲಕಗಳನ್ನು ಅಳವಡಿಸಬೇಕು. ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ನೆಟ್, ಕೆ-ಸೆಟ್ ಮತ್ತು ಯುಪಿಎಸ್‌ಸಿ, ಕೆಪಿಎಸ್‌ಸಿ ಪೂರ್ವ ತಯಾರಿ ಪುಸ್ತಕಗಳನ್ನು ಉಚಿತವಾಗಿ ನೀಡುವ ಕ್ರಮ ಕೈಗೊಳ್ಳಬೇಕು. ಕೂಡಲೇ ಕೋಚಿಂಗ್ ಸೆಂಟರ್ ಆರಂಭಿಸಬೇಕು. ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.