2017ರ ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ದೋಷಿ ಹಾಗೂ ಬಿಜೆಪಿ ನಾಯಕ ಕುಲ್‌ದೀಪ್‌ ಸಿಂಗ್‌ ಸೆಂಗರ್‌ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವ ದೆಹಲಿ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ನವದೆಹಲಿ : 2017ರ ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ದೋಷಿ ಹಾಗೂ ಬಿಜೆಪಿ ನಾಯಕ ಕುಲ್‌ದೀಪ್‌ ಸಿಂಗ್‌ ಸೆಂಗರ್‌ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವ ದೆಹಲಿ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು

ಡಿ.23ರಂದು ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ, ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸಿಜೆಐ ನ್ಯಾ। ಸೂರ್ಯಕಾಂತ್‌, ನ್ಯಾ। ಜೆ.ಕೆ.ಮಹೇಶ್ವರಿ, ನ್ಯಾ। ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರಿರುವ ರಜಾ ಪೀಠವು ತಡೆ ನೀಡಿದೆ. ಜತೆಗೆ ಹೈಕೋರ್ಟ್‌ ತೀರ್ಪಿನ ಅನ್ವಯ ಸೆಂಗರ್‌ನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿರುವ ಪೀಠ, ಸಿಬಿಐ ಮೇಲ್ಮನವಿಗೆ ಪ್ರತಿಕ್ರಿಯಿಸುವಂತೆ ಸೆಂಗರ್‌ಗೆ ನೋಟಿಸ್‌ ಜಾರಿ ಮಾಡಿದೆ.

ಇದೇ ವೇಳೆ, ದಿಲ್ಲಿ ಹೈಕೋರ್ಟ್‌ ಆದೇಶದಿಂದ ಕಾನೂನು ಬಗ್ಗೆ ಗಣನೀಯ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದ ಪೀಠ, ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ. ಇದೇ ವೇಳೆ, ‘ಕೆಲವು ಉತ್ತಮ ಜಡ್ಜ್‌ಗಳೂ ಕೆಲವೊಮ್ಮೆ ತಪ್ಪು ಮಾಡುತ್ತಾರೆ’ ಎಂಬ ಮಾತುಗಳನ್ನೂ ಪೀಠ ಆಡಿದೆ.

ಅತ್ಯಾಚಾರ ಪ್ರಕರಣದಲ್ಲಿ 2019ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್‌ ಮೇಲ್ಮನವಿ ಸಲ್ಲಿಸಿದ್ದ. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಸೆಂಗರ್‌ ಶಿಕ್ಷೆಯನ್ನು ಮೇಲ್ಮನವಿ ವಿಚಾರಣೆ ಮುಗಿಯುವವರೆಗೆ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಇದರ ವಿರುದ್ಧ ಸಂತ್ರಸ್ತೆ ಹಾಗೂ ಮಹಿಳಾಪರ ಹೋರಾಟಗಾರರು ಬೀದಿಗಿಳಿದಿದ್ದರು.

ಆದೇಶಕ್ಕೆ ಸಂತ್ರಸ್ತೆ ಸ್ವಾಗತ:

ಆದೇಶವನ್ನು ಪ್ರಕರಣದ ಸಂತ್ರಸ್ತೆ ಹಾಗೂ ಸ್ತ್ರೀವಾದಿ ಹೋರಾಟಗಾರರು ಸ್ವಾಗತಿಸಿದ್ದು, ಸೆಂಗರ್‌ಗೆ ಗಲ್ಲು ಶಿಕ್ಷೆ ಕೊಡಿಸುವವರೆಗೆ ಹೋರಾಡುವುದಾಗಿ ಹೇಳಿದ್ದಾರೆ.