ಸಾರಾಂಶ
ಬೆಂಗಳೂರು : ಜೆಡಿಎಸ್ ಕಾರ್ಯಕರ್ತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಇದೇ ವೇಳೆ, ಸೂರಜ್ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನೂ ಸಲ್ಲಿಕೆ ಮಾಡಿದ್ದಾರೆ.
ಬಾಡಿ ವಾರಂಟ್ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪಿ ಸೂರಜ್ ರೇವಣ್ಣ ಅವರನ್ನು ಜು.1ರವರೆಗೆ ಎಂಟು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು. ಹೀಗಾಗಿ ಸಿಐಡಿ ಅಧಿಕಾರಿಗಳು ಆರೋಪಿ ಸೂರಜ್ ಅವರನ್ನು ವಶಕ್ಕೆ ಪಡೆದು ಸಿಐಡಿ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಆರಂಭಿಸಿದ್ದಾರೆ. ಮಂಗಳವಾರ ಅಥವಾ ಬುಧವಾರ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಕಾರ್ಯಕರ್ತನ ದೂರು ಆಧರಿಸಿ ಹೊಳೆನರಸೀಪುರ ಠಾಣೆ ಪೊಲೀಸರು ಆರೋಪಿ ಸೂರಜ್ ಅವರನ್ನು ಶನಿವಾರ ಹಾಸನದಲ್ಲಿ ವಶಕ್ಕೆ ಪಡೆದು ಸುಮಾರು ಎಂಟು ತಾಸು ವಿಚಾರಣೆ ನಡೆಸಿದ್ದರು. ಬಳಿಕ ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ನಂತರ ಆರೋಪಿಯನ್ನು ಕೋರಮಂಗಲದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಈ ನಡುವೆ ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿತ್ತು.
ಹೀಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಆರೋಪಿಯನ್ನು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು 8 ದಿನಗಳ ಕಾಲ ಆರೋಪಿ ಸೂರಜ್ ಅವರನ್ನು ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ದೂರುದಾರನ ಹೇಳಿಕೆ ದಾಖಲು
ಭಾನುವಾರ ದೂರುದಾರನನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದ ಹಾಸನ ಪೊಲೀಸರು, ಸುರಕ್ಷತೆ ದೃಷ್ಟಿಯಿಂದ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದರು. ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಿಐಡಿ ಅಧಿಕಾರಿಗಳು ಆತನನ್ನು ಭೇಟಿಯಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.