ಕೆಫೆ ಸ್ಫೋಟ : ತಮಿಳುನಾಡಿನಲ್ಲಿ ಕಚ್ಚಾ ಬಾಂಬ್ ತಯಾರು ?

| Published : Mar 31 2024, 02:03 AM IST / Updated: Mar 31 2024, 05:50 AM IST

Rameshwaram Cafe

ಸಾರಾಂಶ

ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಮುನ್ನ ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಕಚ್ಚಾ ಬಾಂಬ್ (ಐಇಡಿ) ಅನ್ನು ಶಂಕಿತ ಐಸಿಸ್‌ ಉಗ್ರರು ತಯಾರಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕೆ ವ್ಯಕ್ತಪಡಿಸಿದೆ.

 ಬೆಂಗಳೂರು :  ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಮುನ್ನ ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಕಚ್ಚಾ ಬಾಂಬ್ (ಐಇಡಿ) ಅನ್ನು ಶಂಕಿತ ಐಸಿಸ್‌ ಉಗ್ರರು ತಯಾರಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕೆ ವ್ಯಕ್ತಪಡಿಸಿದೆ.

ನಾಲ್ಕು ವರ್ಷಗಳಿಂದ ಎನ್‌ಐಎ ಕೈ ಸಿಗದೆ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ, ಕೆಫೆ ಸ್ಫೋಟಕಕ್ಕೂ ಮುನ್ನ ತಮಿಳುನಾಡಿನಲ್ಲಿ ಆಶ್ರಯ ಪಡೆದಿದ್ದರು. ಹಾಗಾಗಿ ಈ ವಿಧ್ವಂಸಕ ಕೃತ್ಯಕ್ಕೆ ಬಳಸಲಾದ ಕಚ್ಚಾ ಬಾಂಬ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಬಳಿ ತಯಾರಿಸಿರಬಹುದು ಎನ್ನಲಾಗಿದೆ.

ಮಾ.1 ರಂದು ರಾಮೇಶ್ವರಂ ಕೆಫೆಗೆ ತಮಿಳುನಾಡು ಕಡೆಯಿಂದಲೇ ಮುಸಾವೀರ್ ಹುಸೇನ್ ಶಾಜಿಬ್‌ ಬಂದಿದ್ದ. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿಳಿದು ಅಲ್ಲಿಂದ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಆತ ಪ್ರಯಣಿಸಿದ್ದ. ಈ ಸಂಗತಿ ಬಿಬಿಎಂಟಿಸಿ ಬಸ್ಸಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಬೆಳಕಿಗೆ ಬಂದಿತ್ತು ಎಂದು ಮೂಲಗಳು ಹೇಳಿವೆ.

2022ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕವಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶಿವಮೊಗ್ಗ ಐಸಿಸ್‌ ಮ್ಯಾಡ್ಯುಲ್‌ ಗ್ಯಾಂಗ್‌ನ ಶಂಕಿತ ಮಹಮ್ಮದ್ ಶಾಕೀರ್, ಮಂಗಳೂರು ಸ್ಫೋಟಕಕ್ಕೂ ಮುನ್ನ ಅದೇ ವರ್ಷದ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮತೀನ್ ತಾಹಾ ಹಾಗೂ ಮುಸಾವೀರ್‌ನನ್ನು ಭೇಟಿಯಾಗಿದ್ದ. ಆಗಲೇ ಅರುಣ್ ಗೌಳಿ ಹೆಸರಿನಲ್ಲಿ ಲಾಡ್ಜ್‌ನಲ್ಲಿ ಬಾಡಿಗೆ ಪಡೆದು ಶಾಕೀರ್ ವಾಸವಾಗಿದ್ದ. ಈ ಭೇಟಿ ಬಳಿಕ ಮೈಸೂರಿಗೆ ಮರಳಿದ ಆತ, ಆ ಮನೆಯಲ್ಲಿ ನಟ್‌, ಬೋಲ್ಟ್‌ ಹಾಗೂ ಎಲೆಕ್ಟ್ರಿಕ್ ಸರ್ಕಿಟ್‌, ಪೋಷಾಶಿಯಂ ನೈಟ್ರೇಟ್‌ ಬಳಸಿ ಕಚ್ಚಾ ಬಾಂಬ್ ತಯಾರಿಸಿ ಅದನ್ನು ಕುಕ್ಕರ್‌ನಲ್ಲಿಟ್ಟು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದ. ಆದರೆ ನಿಗದಿತ ಸ್ಥಳ ತಲುವ ಮುನ್ನ ಕುಕ್ಕರ್ ಸ್ಫೋಟವಾಗಿತ್ತು. ಅದೇ ರೀತಿ ಕೆಫೆಗೆ ಬಾಂಬ್ ಇಡಲು ಸಂಚು ರೂಪಿಸಿದ್ದ ಮುಸಾವೀರ್ ಹಾಗೂ ತಾಹಾ, ಆ ಕಚ್ಚಾ ಬಾಂಬ್ ಅನ್ನು ಬೆಂಗಳೂರಿಗೆ ಸಮೀಪದ ತಮಿಳುನಾಡಿನ ಕೃಷ್ಣಗಿರಿಯಲ್ಲೇ ತಯಾರಿಸಿ ತೆಗೆದುಕೊಂಡು ಬಂದಿರುವ ಸಾಧ್ಯತೆಗಳಿವೆ ಎಂದು ಮೂಲಗಳು ವಿವರಿಸಿವೆ. 

5 ರಿಂದ 10 ಸಾವಿರ ರು?

ನಟ್‌, ಬೋಲ್ಟ್‌ಗಳು, ಎಲೆಕ್ಟ್ರಿಕ್ ಸರ್ಕಿಟ್‌, ಅಮೋನಿಯಂ ನೈಟ್ರೇಟ್‌ ಹಾಗೂ ಟೈಮರ್‌ ಬಳಸಿ ಕಚ್ಚಾ ಬಾಂಬ್ (ಐಇಡಿ) ಅನ್ನು ದುಷ್ಕರ್ಮಿಗಳು ತಯಾರಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗೆ ಬಳಸುವ ಹಾಗೂ ಆನ್‌ಲೈನ್‌ ಸೇರಿದಂತೆ ಸಾರ್ವಜನಿಕವಾಗಿ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್‌ ಸರ್ಕಿಟ್ ಬೋರ್ಡ್‌ ಅನ್ನೇ ಬಾಂಬ್ ತಯಾರಿಕೆಗೆ ಬಳಸಲಾಗಿದೆ. ಹೀಗಾಗಿ ಈ ಕಚ್ಚಾ ಬಾಂಬ್ ತಯಾರಿಕೆಗೆ 5 ರಿಂದ 10 ಸಾವಿರ ವೆಚ್ಚವಾಗಿರಬಹುದು ಎಂದು ತಿಳಿದು ಬಂದಿದೆ.