ಕುಡಿವ ನೀರು ಕಾಮಗಾರಿಗೆ ತಡೆ: ವಿನಯ್‌ ಸೂಚನೆ ವಿವಾದ

| Published : Jun 27 2024, 05:57 AM IST

dharwad mla Vinay Kulkarni

ಸಾರಾಂಶ

ಶಾಸಕ ವಿನಯ್ ಕುಲಕರ್ಣಿ ಕಾನೂನು ಬಾಹಿರವಾಗಿ’ ನಿರ್ದೇಶನ ನೀಡಿರುವುದು ವಿವಾದ ಹುಟ್ಟುಹಾಕಿದೆ.

ಬೆಂಗಳೂರು : ‘ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರು ಮಂಡಳಿಯಲ್ಲಿ ಚಾಲನೆಯಲ್ಲಿರುವ ಅಮೃತ್‌-1 ಹಾಗೂ ಅಮೃತ್‌ -2 ಅಡಿ ಅನುಮೋದನೆಗೊಂಡಿರುವ ಕಾಮಗಾರಿಗಳು ಸೇರಿದಂತೆ ಎಲ್ಲಾ ಯೋಜನೆ ಹಾಗೂ ಕಾಮಗಾರಿ ತಡೆಹಿಡಿ ಹಾಗೂ ಯೋಜನೆಗಳನ್ನು ಕೂಡಲೇ ತಡೆ ಹಿಡಿಯಬೇಕು ಹಾಗೂ ನನ್ನ ಗಮನಕ್ಕೆ ತರಬೇಕು’ ಎಂದು ‘ಕಾನೂನು ಬಾಹಿರವಾಗಿ’ ನಿರ್ದೇಶನ ನೀಡಿರುವುದು ವಿವಾದ ಹುಟ್ಟುಹಾಕಿದೆ.

ತಕ್ಷಣ ಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ತಡೆ ಹಿಡಿಯಬೇಕು ಎಂದು ಟಿಪ್ಪಣಿ ಮಂಡಿಸಿರುವ ಕುಲಕರ್ಣಿ ಅವರ ಆಕ್ಷೇಪಾರ್ಹ ನಡೆ ಗುತ್ತಿಗೆದಾರರ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಇಂತಹ ನಿರ್ದೇಶನ ಕಾನೂನು ಬಾಹಿರವಾಗಿದ್ದು, ಇಂತಹ ಅಧಿಕಾರವಿರುವುದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಸ್‌ಎಚ್‌ಪಿಎಸ್‌ಸಿ (ಉನ್ನತ ಮಟ್ಟದ ಸಮಿತಿ)ಗೆ ಮಾತ್ರ. ಮಂಡಳಿಯ ಅಧ್ಯಕ್ಷರಷ್ಟೇ ಅಲ್ಲ ಖುದ್ದು ಸಚಿವರಿಗೂ ಇಂತಹ ಅಧಿಕಾರವಿಲ್ಲ ಎಂದು ಕಾನೂನು ತಜ್ಞರ ಸೂಚನೆ ಮೇರೆಗೆ ಕುಲಕರ್ಣಿ ಟಿಪ್ಪಣಿಯನ್ನು ತಡೆಹಿಡಿಯಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ತಡೆ ಹಿಡಿಯುವ ಅಧಿಕಾರ ಮಂಡಳಿಗಾಗಲಿ ಅಥವಾ ಮಂಡಳಿ ಅಧ್ಯಕ್ಷರಿಗಾಗಲಿ ಇಲ್ಲ. ಹೀಗಿದ್ದರೂ ಕಾನೂನು ಉಲ್ಲಂಘಿಸಿ ಕಾಮಗಾರಿಗಳಿಗೆ ತಡೆ ನೀಡಲು ಆದೇಶಿಸಿದ್ದಾರೆ. ತನ್ಮೂಲಕ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಾರಂಭವಾಗಲು ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.

 ಏನಿದು ವಿವಾದ? 

ಫೆ.14 ರಂದು ಟಿಪ್ಪಣಿ ಮಂಡಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್‌ ಕುಲಕರ್ಣಿ, ಕಾಮಗಾರಿ ಕಾರ್ಯಾದೇಶ (ವರ್ಕ್‌ ಆರ್ಡರ್) ನೀಡಿ ಕಾಮಗಾರಿ ಆರಂಭಿಸದಿರುವ, ಎಲ್‌ಒಎ (ಲೆಟರ್‌ ಆಫ್‌ ಆ್ಯಕ್ಸೆಪ್ಟೆನ್ಸ್) ನೀಡಲಾಗಿರುವ, ಎಲ್‌ಒಎ ನೀಡಲು ಹಾಗೂ ಟೆಂಡರ್‌ ತೆರೆದು ಅನುಮೋದನೆ ಬಾಕಿ ಇರುವ, ಟೆಂಡರ್‌ ಹಂತದಲ್ಲಿರುವ ಹಾಗೂ ಟೆಂಡರ್‌ ಅವಧಿ ಮುಗಿದಿರುವ, ಅಮೃತ್‌ 1 ಹಾಗೂ ಅಮೃತ್‌ 2 ಅಡಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿ ಹಾಗೂ ಯೋಜನೆಗಳನ್ನು ನನ್ನ ಗಮನಕ್ಕೆ ಮಂಡಿಸಬೇಕು. ನಾನು (ಮಂಡಳಿ ಅಧ್ಯಕ್ಷರು) ಅನುಮೋದನೆ ನೀಡಿದ ಬಳಿಕವಷ್ಟೇ ಮುಂದುವರೆಸಬೇಕು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆಯಬೇಕು ಎಂದು ಹೇಳಿದ್ದಾರೆ.

ಯಾವ ಉದ್ದೇಶದಿಂದ ಎಲ್ಲವನ್ನೂ ತಮ್ಮ ಮುಂದೆ ಮತ್ತೊಮ್ಮೆ ಮಂಡಿಸುವಂತೆ ಸೂಚಿಸಿದ್ದಾರೆ ಎಂಬ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ಮಂಡಳಿ ಅಧ್ಯಕ್ಷರಿಗೆ ಅಧಿಕಾರವಿಲ್ಲ: 

ಇನ್ನು ಈ ಬಗ್ಗೆ ಕಾನೂನು ತಜ್ಞರು ಆಕ್ಷೇಪ ಎತ್ತಿದ್ದು, ಸರ್ಕಾರದಿಂದ ಅನುಮೋದನೆಗೊಂಡು ಚಾಲ್ತಿಯಲ್ಲಿರುವ ಯೋಜನಾ ಕಾಮಗಾರಿಗಳನ್ನು ತಡೆಹಿಡಿಯಲು ಯಾವುದೇ ಕಾನೂನಿನಲ್ಲೂ ಅವಕಾಶವಿಲ್ಲ. ಯೋಜನಾ ಕಾಮಗಾರಿಗಳು ವಿಳಂಬವಾದರೆ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರತೆ ಆಗುತ್ತದೆ. ಇದರಿಂದ ಮಂಡಳಿ ಹಾಗೂ ಸರ್ಕಾರಕ್ಕೆ ನಷ್ಟ ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಟಿಟಿಪಿ ನಿಯಮಾವಳಿ ಪ್ರಕಾರ ಲೋಕೋಪಯೋಗಿ ಕೋಡ್‌ ಹಾಗೂ ಆರ್ಥಿಕ ಇಲಾಖೆಯ ಮಾರ್ಗಸೂಚಿ ಪ್ರಕಾರ ಎಲ್‌ಒಎ ನೀಡಿದ ನಂತರ ಮುಂದಿನ ಅಗತ್ಯ ಕ್ರಮ ಜರುಗಿಸಬೇಕಾಗಿರುತ್ತದೆ. ಕಾಮಗಾರಿಗಳನ್ನು ವಿಳಂಬ ಹಾಗೂ ತಡೆ ಮಾಡಿದರೆ ಯೋಜನಾ ವೆಚ್ಚ ಹೆಚ್ಚಾಗಿ ಆರ್ಥಿಕ ಹೊರೆ ಉಂಟಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ತಡೆ ನೀಡಬಾರದು.

ಇನ್ನು ಟೆಂಡರ್‌ ಕರೆದು, ಟೆಂಡರ್‌ ಪ್ರಕ್ರಿಯೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರ ಇರುತ್ತದೆ.

ಆಡಳಿತಾತ್ಮಕ ಅನುಮೋದನೆ ಪಡೆದಂತಹ ಕಾಮಗಾರಿಗಳಿಗೆ ಅತೀ ಶೀಘ್ರದಲ್ಲಿ ಟೆಂಡರ್‌ ಕರೆಯಬೇಕಾಗಿರುತ್ತದೆ. ಅಮೃತ್ 2.0 ಹಾಗೂ ಅಮೃತ್‌ -1 ಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಸ್‌ಎಚ್‌ಪಿಎಸ್‌ಸಿ (ಉನ್ನತ ಮಟ್ಟದ ಸಮಿತಿ) ರಚನೆ ಮಾಡಲಾಗಿರುತ್ತದೆ. ಹೀಗಾಗಿ ಮಂಡಳಿಯು ಅನುಷ್ಠಾನ ಏಜೆನ್ಸಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.