ಸಾರಾಂಶ
ಕೊಲೆ, ಹಣಕಾಸು ವಂಚನೆ ಮತ್ತು ಮಾದಕ ದ್ರವ್ಯ ಸಾಗಣೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಗಳು ಕೆಲವೇ ದಿನಗಳಲ್ಲಿ ಬಂಧಮುಕ್ತರಾಗಲು ‘ಅರೆಸ್ಟ್ ಮೆಮೊ’ (ಬಂಧನ ಕಾರಣ ವಿವರಿಸಿ ನೀಡುವ ಜ್ಞಾಪನಾ ಪತ್ರ) ವರದಾನವಾಗಿ ಪರಿಣಮಿಸಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ಕೊಲೆ, ಹಣಕಾಸು ವಂಚನೆ ಮತ್ತು ಮಾದಕ ದ್ರವ್ಯ ಸಾಗಣೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಗಳು ಕೆಲವೇ ದಿನಗಳಲ್ಲಿ ಬಂಧಮುಕ್ತರಾಗಲು ‘ಅರೆಸ್ಟ್ ಮೆಮೊ’ (ಬಂಧನ ಕಾರಣ ವಿವರಿಸಿ ನೀಡುವ ಜ್ಞಾಪನಾ ಪತ್ರ) ವರದಾನವಾಗಿ ಪರಿಣಮಿಸಿದೆ.
ಆರೋಪಿಗಳನ್ನು ಬಂಧಿಸಿದ ಕೂಡಲೇ ಬಂಧಿತನಿಗೆ ಅರೆಸ್ಟ್ ಮೆಮೊ ನೀಡುವುದು ಕಡ್ಡಾಯ. ಆದರೆ, ಬಂಧಿಸಿದ ತಕ್ಷಣವೇ ಪೊಲೀಸರು ಅರೆಸ್ಟ್ ಮೆಮೋ ನೀಡದಿರುವುದು ಅಥವಾ ಒಂದೊಮ್ಮೆ ನೀಡಿದರೂ ವಿಳಂಬ ಧೋರಣೆ ತೋರುವುದರಿಂದ ಬಂಧಿತರ ಬಿಡುಗಡೆಗೆ ನ್ಯಾಯಾಲಯಗಳು ಆದೇಶಿಸುತ್ತಿರುವ ಬೆಳವಣಿಗೆಗಳು ಇತ್ತೀಚೆಗೆ ಹೆಚ್ಚಾಗಿದೆ.
ಅದರಲ್ಲೂ ಬಂಧನಕ್ಕೆ ಒಳಗಾದ ರಾಜಕೀಯ ನಾಯಕರು, ನಟ-ನಟಿಯರು ಸೇರಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ಗುರುತಿಸಿಕೊಂಡವರ ಕ್ಷಿಪ್ರ ಬಿಡುಗಡೆಗೆ ಪೊಲೀಸರು ತ್ವರಿತವಾಗಿ ಅರೆಸ್ಟ್ ಮೆಮೊ ನೀಡದಿರುವುದು ಕಾನೂನು ಅಸ್ತ್ರವಾಗಿ ಬಳಕೆಯಾಗುತ್ತಿದೆ.
ದರ್ಶನ್‌ಗೂ ವಿಳಂಬವಾಗಿ ಮೆಮೊ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ ಇನ್ನಿತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರಾತಿ ಮಾಡಲು ಪೊಲೀಸರು ಅರೆಸ್ಟ್ ಮೆಮೊ ನೀಡುವಲ್ಲಿ ಅನುಸರಿಸಿದ ವಿಳಂಬ ನೀತಿ ಸಹ ಒಂದು ಕಾರಣ. ಇದೇ ಕಾರಣದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನವಾದ 24 ಗಂಟೆಯಲ್ಲಿ ಬಿಡುಗಡೆಯಾದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರಿ ಎಂದು ಹೇಳಿಕೊಂಡು ಹಲವರಿಗೆ ಕೋಟ್ಯಂತರ ಹಣ ವಂಚಿಸಿದ ಆರೋಪ ಸಂಬಂಧ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣದಲ್ಲಿ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಬಿಡುಗಡೆಯಾಗಲೂ ಪೊಲೀಸರು ಅರೆಸ್ಟ್ ಮೆಮೊ ನೀಡದಿರುವುದು ಕಾರಣವಾಗಿದೆ.
ವಿಪರ್ಯಾಸವೆಂದರೆ ಮೆಮೊ ಮಾಹಿತಿ ನೀಡದ ಕಾರಣ ಬ್ಯಾಂಕಾಕ್ ನಿಂದ 23 ಕೆ.ಜಿ. ಗಾಂಜಾ ಸಾಗಿಸಲು ಯತ್ನಿಸಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ದೆಹಲಿ ಮೂಲದ ಯುವತಿಯರಿಬ್ಬರು ಒಂದು ವಾರದಲ್ಲೇ ಜೈಲಿನಿಂದ ಬಿಡುಗಡೆಗೊಂಡರು.
ಅಂದರೆ ಬಂಧಿಸಿದ ತಕ್ಷಣವೇ ಆರೋಪಿಗೆ ಅರೆಸ್ಟ್ ಮೆಮೊ ನೀಡದಿರುವುದು, ಮೆಮೊದಲ್ಲಿ ಬಂಧನದ ಕಾರಣ, ಪ್ರಕರಣದ ಸತ್ಯಾಂಶವನ್ನು ಸಮರ್ಪಕವಾಗಿ ಉಲ್ಲೇಖಿಸದಿರುವುದು, ಆರೋಪಿಗೆ ಬಂಧನ ಕಾರಣ ವಿವರಿಸದೇ ಇರುವುದು ಮತ್ತು ಅರೆಸ್ಟ್ ಮೆಮೊವನ್ನು ಸೂಕ್ತ ರೀತಿಯಲ್ಲಿ ದಾಖಲಿಸದೇ ಇರುವಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇದೇ ಕಾರಣ ಪರಿಗಣಿಸಿ ತಕ್ಷಣವೇ ಆರೋಪಿಗಳ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿದೆ.
ಏನಿದು ಅರೆಸ್ಟ್ ಮೆಮೊ?: ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 50(1) ಮತ್ತು ಸಂವಿಧಾನದ ಪರಿಚ್ಛೇದ 22(1) ಪ್ರಕಾರ ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಕೂಡಲೇ ಬಂಧನದ ಕಾರಣ ವಿವರಿಸಿ ಆತನಿಗೆ ತನಿಖಾಧಿಕಾರಿಗಳು ಅರೆಸ್ಟ್ ಮೆಮೊ ನೀಡುವುದು ಕಡ್ಡಾಯ. ಬಂಧನದ ಕಾರಣ, ಪ್ರಕರಣ ಸತ್ಯಾಂಶಗಳನ್ನು ಮೆಮೊನಲ್ಲಿ ಸೂಕ್ತವಾಗಿ ದಾಖಲಿಸಿ, ಆರೋಪಿಗೆ ಲಿಖಿತರೂಪದಲ್ಲಿ ನೀಡಬೇಕಾಗುತ್ತದೆ.
ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮಂದೆ ಹಾಜರುಪಡಿಸಿದಾಗ ತನಿಖಾಧಿಕಾರಿಗಳು ನೀಡುವ ರಿಮ್ಯಾಂಡ್ ರಿಪೋರ್ಟ್‌ನಲ್ಲಿ ಅರೆಸ್ಟ್ ಮೆಮೊ ಲಗತ್ತಿಸಬೇಕು. ಅದನ್ನು ಕೋರ್ಟ್ ದಾಖಲಿಸಿಕೊಳ್ಳಬೇಕು. ಈ ಕುರಿತು ಪಂಕಜ್ ಬನ್ಸಾಲ್, ಪ್ರಬೀರ್ ಪುರ್ಕಾಯಸ್ತಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಈ ಮಾನದಂಡ ಅನುಸರಿಸದೇ ಇದ್ದಾಗ ಆರೋಪಿಯ ಬಂಧನ ಪ್ರಕ್ರಿಯೆಯೇ ಅಕ್ರಮವಾಗುತ್ತದೆ.
ಸಿಆರ್‌ಪಿಸಿ ಸೆಕ್ಷನ್ 41(ಬಿ) ಅರೆಸ್ಟ್ ಮೊಮೊ ಸಿದ್ಧಪಡಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಸೆಕ್ಷನ್ 41(ಬಿ)(1)(2) ಪ್ರಕಾರ ಆರೋಪಿಯನ್ನು ಬಂಧಿಸಿದಾಗ, ಅದನ್ನು ಬಂಧಿತನ ಕುಟುಂಬ ಸದಸ್ಯರೊಬ್ಬರ ಅಥವಾ ಬಂಧನ ಮಾಡಿದ ಪ್ರದೇಶದಲ್ಲಿನ ಸದಸ್ಯರೊಬ್ಬರಿಂದ ದೃಢೀಕರಿಸಬೇಕು. ಅದಕ್ಕೆ ಅವರಿಂದ ಮತ್ತು ಬಂಧಿತನಿಂದ ಸಹಿ ಪಡೆಯಬೇಕು. ಸಿಆರ್‌ಪಿಸಿಯಲ್ಲಿ ಸೆಕ್ಷನ್ 50(1) ಬಗ್ಗೆ ಅರೆಸ್ಟ್ ಮೆಮೊ ಬಗ್ಗೆ ಹೇಳಲಾಗಿತ್ತು. ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 47 ಅಡಿ ಹೇಳಲಾಗಿದೆ.
ನಟ ದರ್ಶನ್ ಕೇಸಲ್ಲಿ ಕೋರ್ಟಿಂದ ಮೆಮೊವಿನ ಪ್ರಾಮುಖ್ಯತೆ ವಿವರಣೆ
ನಟ ದರ್ಶನ್‌ಗೆ ಜಾಮೀನು ನೀಡಿದ ಆದೇಶದಲ್ಲಿ ಅರೆಸ್ಟ್ ಮೆಮೊವಿನ ಪ್ರಾಮುಖ್ಯತೆ, ಅದರಲ್ಲಿ ಇರಬೇಕಾದ ಮೂಲಭೂತ ಸಂಗತಿಗಳ ಬಗ್ಗೆ ಸಮಗ್ರವಾಗಿ ವಿವರಿಸಿರುವ ಹೈಕೋರ್ಟ್, ಏಕರೂಪದ ಅರೆಸ್ಟ್ ಮೆಮೊ ಸಿದ್ಧಪಡಿಸಲು ತಕ್ಷಣವೇ ಕ್ರಮ ಜರುಗಿಸುವಂತೆ ರಾಜ್ಯ ಡಿಜಿಪಿಗೆ ನಿರ್ದೇಶಿಸಿದೆ.