ಸಾರಾಂಶ
ಬೆಂಗಳೂರು : ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಆಕೆಯ ಕಾಲೇಜು ಸಹಪಾಠಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಪತಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್ತಹಳ್ಳಿ ನಿವಾಸಿ ಸತೀಶ್ ಬಂಧಿತ. ಕೊಡತಿ ಗೇಟ್ ಸಮೀಪ ಶುಕ್ರವಾರ ರಾತ್ರಿ ಕಿಶೋರ್ (38) ಮೇಲೆ ಹಲ್ಲೆ ನಡೆಸಿ ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಸತೀಶ್ ರೆಡ್ಡಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ನಗರದಲ್ಲಿ ಕ್ಯಾಬ್ ಚಾಲಕನಾಗಿದ್ದ ಕಾಲೇಜು ಸಹಪಾಠಿ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಿಶೋರ್ ಜತೆ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ರೆಡ್ಡಿ ಶಂಕಿಸಿದ್ದ. ಇದರಿಂದ ಉಂಟಾದ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಪ್ರತ್ಯೇಕವಾಗಿದ್ದರು. ಆಗ ತನ್ನ ಪತ್ನಿ ಜತೆ ಕ್ಯಾಬ್ ಚಾಲಕನ ಸ್ನೇಹ ಮುಂದುವರೆಸಿದ್ದ ಸಂಗತಿ ತಿಳಿದು ರೆಡ್ಡಿ ಕೆರಳಿದ್ದ. ಕೊನೆಗೆ ಆತನ ಕೊಲೆಗೆ ನಿರ್ಧರಿಸಿದ್ದಾನೆ. ಪತ್ನಿ ಮನೆಗೆ ಕಿಶೋರ್ ಬಂದಾಗ ಆತನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಂದು ಸತೀಶ್ ರೆಡ್ಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
* ಸ್ನೇಹಿತನ ಜತೆಗೆ ಪತ್ನಿ ಅನೈತಿಕ ಸಂಬಂಧ ಶಂಕೆ
* 12 ವರ್ಷದ ಹಿಂದೆ ವಿವಾಹವಾಗಿದ್ದ ಆರೋಪಿ
* ಕೌಟುಂಬಿಕ ಕಲಹದ ಹಿನ್ನೆಲೆ ಬೇರೆಯಾಗಿದ್ದ ದಂಪತಿ
* ಶುಕ್ರವಾರ ಪತ್ನಿ ಮನೆಗೆ ಬಂದಿದ್ದ ಗೆಳೆಯನ ಕೊಲೆ
* ಸಿಟ್ಟಿಗೆದ್ದು ಚಾಕು ಇರಿದು ಕೊಲೆ ಮಾಡಿದವ ಸೆರೆ