ಮದುವೆ ನಿರಾಕರಿಸಿದ ಗೃಹಿಣಿಯ ಮನೆಗೆ ಬೆಂಕಿ ಇಟ್ಟಿದ್ದವನ ಬಂಧನ

| Published : May 03 2024, 01:36 AM IST / Updated: May 03 2024, 05:09 AM IST

WOMAN ARREST
ಮದುವೆ ನಿರಾಕರಿಸಿದ ಗೃಹಿಣಿಯ ಮನೆಗೆ ಬೆಂಕಿ ಇಟ್ಟಿದ್ದವನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ತನ್ನ ಸಂಬಂಧಿ ಮಹಿಳೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿ ಆಗಿದ್ದ ಕಿಡಿಗೇಡಿಯೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ತನ್ನ ಸಂಬಂಧಿ ಮಹಿಳೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿ ಆಗಿದ್ದ ಕಿಡಿಗೇಡಿಯೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿ ಅರ್ಬಾಜ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಸಂಪಿಗೆಹಳ್ಳಿ ಸಮೀಪ ತನ್ನ ಸಂಬಂಧಿ ಮನೆಗೆ ತೆರಳಿ ಈ ಕೃತ್ಯ ಎಸಗಿ ಆರೋಪಿ ಪರಾರಿಯಾಗಿದ್ದ. ಆರಂಭದಲ್ಲಿ ಕೃತ್ಯವು ಶಾಟ್ ಸರ್ಕ್ಯೂಟ್‌ನಿಂದ ಆಗಿದೆ ಎಂದು ಭಾವಿಸಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ತಾನೇ ಬೆಂಕಿ ಹಚ್ಚಿರುವುದಾಗಿ ಸ್ನೇಹಿತರ ಮುಂದೆ ಉಡಾಫೆ ಮಾತನಾಡಿ ಅರ್ಬಾಜ್‌ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಪತಿ ಹಾಗೂ ಮಕ್ಕಳ ಜತೆ ಅರ್ಬಾಜ್ ಸಂಬಂಧಿ ವಾಸವಾಗಿದ್ದಾಳೆ. ಕೆಲ ದಿನಗಳಿಂದ ಆಕೆಯ ಬೆನ್ನುಬಿದ್ದಿದ್ದ ಅರ್ಬಾಜ್‌, ಪತಿಯನ್ನು ತೊರೆದು ತನ್ನನ್ನು ವರಿಸುವಂತೆ ಕಾಡುತ್ತಿದ್ದ. ಈತನಿಗೆ ಸೊಪ್ಪು ಹಾಕದ ಆಕೆ, ತನ್ನ ಬದುಕಿಗೆ ಅಡ್ಡಿ ಆಗದಂತೆ ಎಚ್ಚರಿಕೆ ನೀಡಿದ್ದಳು. ಇದರಿಂದ ಕೆರಳಿದ ಆರೋಪಿ, ರಂಜಾನ್ ಹಬ್ಬದ ದಿನ ಸಂಬಂಧಿ ಮನೆಗೆ ತೆರಳಿ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಆದರೆ ಹಬ್ಬದ ದಿನ ತವರು ಮನೆಗೆ ತೆರಳಿದ್ದರಿಂದ ಸಂತ್ರಸ್ತೆ ಕುಟುಂಬದವರು ಯಾರು ಇರಲಿಲ್ಲ. ಹೀಗಾಗಿ ಅಂದು ಪ್ರಾಣಹಾನಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಗೆ ಸಂತ್ರಸ್ತೆ ಪತಿ ದೂರು ನೀಡಿದ್ದರು. ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ಕುಟುಂಬದವರು ಹೇಳಿದ್ದರು. ಅಂತೆಯೇ ಪೊಲೀಸರು ತನಿಖೆ ಸಹ ನಡೆಸಿದ್ದರು. ಆದರೆ ಕೆಲ ದಿನಗಳ ಬಳಿಕ ತನ್ನ ಸ್ನೇಹಿತರ ಬಳಿ ಸಂತ್ರಸ್ತೆ ಮನೆಗೆ ಬೆಂಕಿ ಇಟ್ಟು ತಾನೇ ಎಂದು ಆರೋಪಿ ಹೇಳಿಕೊಂಡಿದ್ದ. ಈ ವಿಚಾರ ತಿಳಿದ ಸಂತ್ರಸ್ತೆ ಪತಿ, ಆರೋಪಿಗೆ ಕರೆ ಮಾಡಿ ವಿಚಾರಿಸಿದಾಗ ಅವರಿಗೆ ಆತ ಬೆದರಿಕೆ ಹಾಕಿದ್ದ. ಕೊನೆಗೆ ಬೆಂಕಿ ಹಿಂದಿನ ಕೈವಾಡದ ಪೊಲೀಸರಿಗೆ ಸಂತ್ರಸ್ತೆ ಕುಟುಂಬದವರು ಮಾಹಿತಿ ನೀಡಿದರು. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.