ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರ : ತಲೆ ಮೇಲೆ ಹರಿದ ಬಸ್‌

| Published : Oct 01 2024, 01:22 AM IST / Updated: Oct 01 2024, 04:29 AM IST

BMTC
ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರ : ತಲೆ ಮೇಲೆ ಹರಿದ ಬಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಬಿಎಂಟಿಸಿ ಬಸ್‌ ಚಕ್ರ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 ಬೆಂಗಳೂರು : ಕಾರೊಂದು ಡಿಕ್ಕಿಯಾಗಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಬಿಎಂಟಿಸಿ ಬಸ್‌ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಈಶ್ವರ್(44) ಮೃತ ದುರ್ದೈವಿ. ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ತಿಂಡ್ಲು ಸಮೀಪದ ಕೆಪಿಟಿಸಿಎಲ್‌ ಕಚೇರಿ ಬಳಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಈಶ್ವರ್‌, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ತಿಂಡ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದ ಈಶ್ವರ್‌ ಅವೆನ್ಯೂ ರಸ್ತೆಯ ಜುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಅವೆನ್ಯೂ ರಸ್ತೆ ಕಡೆಗೆ ತೆರಳುತ್ತಿದ್ದರು.

ಮಾರ್ಗ ಮಧ್ಯೆ ತಿಂಡ್ಲುವಿನ ಕೆಪಿಟಿಸಿಎಲ್‌ ಕಚೇರಿ ಬಳಿ ತೆರಳುವಾಗ ಕಾರೊಂದು ದ್ವಿಚಕ್ರ ವಾಹನಕ್ಕೆ ತಾಕಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಈಶ್ವರ್‌ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಯಶವಂತಪುರದಿಂದ ಯಲಹಂಕದ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರಗಳು ಈಶ್ವರ್‌ ತಲೆ ಮೇಲೆಯೇ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಲ್ಮೆಟ್‌ ಪುಡಿಪುಡಿ, ಹೊರ ಬಂದ ಮೆದುಳು:

ಈಶ್ವರ್‌ ಹೆಲ್ಮೆಟ್‌ ಧರಿಸಿಯೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಆದರೆ, ದ್ವಿಚಕ್ರ ವಾಹನಕ್ಕೆ ಕಾರು ತಾಕಿದ ಪರಿಣಾಮ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಗೆ ಬಿದ್ದ ಪರಿಣಾಮ ಬಸ್‌ ಚಕ್ರಗಳು ಈಶ್ವರ್‌ ತಲೆ ಭಾಗದಲ್ಲಿ ಉರುಳಿವೆ. ಇದರಿಂದ ಹೆಲ್ಮೆಟ್‌ ಮುರಿದು ಮಿದುಳು ಹೊರಗೆ ಬಂದು ರಸ್ತೆಗೆ ಅಂಟಿಕೊಂಡು ಕೆಲವೇ ಕ್ಷಣಗಳಲ್ಲಿ ಈಶ್ವರ್‌ ಮೃತಪಟ್ಟಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.