ಸಾರಾಂಶ
ಬೆಂಗಳೂರು : ಜಲಮಂಡಳಿಗೆ ಸೇರಿದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವು ಮಾಡಿದ್ದ ಸೆಕ್ಯೂರಿಟಿ ಫೀಲ್ಡ್ ಆಫೀಸರ್ ಸೇರಿ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರ ಮುಖ್ಯರಸ್ತೆಯ ಸೋಂಪುರ ಗೇಟ್ ನಿವಾಸಿ ರಂಜಿತ್ ತಾತಿ (26) ಮತ್ತು ಕಳವು ಮಾಲು ಸ್ವೀಕರಿಸಿದ್ದ ವಿಜಯನಗರ ಆರ್‌ಪಿಸಿ ಲೇಔಟ್ ನಿವಾಸಿ ಸೈಯದ್ ಸಾಹಿಲ್ (42) ಬಂಧಿತರು. ಆರೋಪಿಗಳಿಂದ ಸುಮಾರು ₹5 ಲಕ್ಷ ಮೌಲ್ಯದ ಸೆಂಟ್ರಿಂಗ್ ಸಾಮಾಗ್ರಿ ಜಪ್ತಿ ಮಾಡಲಾಗಿದೆ.
ಹೆಮ್ಮಿಗೇಪುರ ಮುಖ್ಯರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಗೆ ಸೇರಿದ ಜಾಗದಲ್ಲಿ 13 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ನಿರ್ಮಿಸಲು ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದು ಕಾಮಗಾರಿ ಕೈಗೊಂಡಿದೆ. ಸೆ.6ರಿಂದ 8ರ ನಡುವೆ ದುಷ್ಕರ್ಮಿಗಳು ಈ ಕಾಮಗಾರಿ ಸ್ಥಳದಲ್ಲಿ 200 ಕಬ್ಬಿಣದ ಶೀಟ್‌ಗಳು, ಸ್ಲಾಬ್‌ಗಳು ಸೇರಿದಂತೆ ಇತರೆ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ಸುಳಿವು ಆಧರಿಸಿ ಬಂಧನ: ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಆಧರಿಸಿ ಆರೋಪಿ ರಂಜಿತ್‌ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಸೆಂಟ್ರಿಂಗ್ ಸಾಮಗ್ರಿ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಕಳವು ಮಾಲು ಸ್ವೀಕರಿಸಿದ್ದ ಆರೋಪಿ ಸೈಯದ್ ಸಾಹಿಲ್‌ನನ್ನು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಆರೋಪಿ ರಂಜಿತ್ ಸೆಕ್ಯೂರಿಟಿ ಫೀಲ್ಡ್ ಆಫೀಸ್ ಆಗಿದ್ದು, ಕುಟುಂಬದ ಜತೆಗೆ ನಗರದ ಸರ್ಜಾಪುರ ಮುಖ್ಯರಸ್ತೆಯ ಸೋಂಪುರ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಆರೋಪಿಯು ಕಾಮಗಾರಿ ಸ್ಥಳದಿಂದ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವು ಮಾಡಿದ್ದ. ಕದ್ದ ಮಾಲುಗಳನ್ನು ಗುಜರಿ ವ್ಯಾಪಾರಿ ಸೈಯದ್ ಸಾಹಿಲ್‌ಗೆ ಮಾರಾಟ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.