ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಂಬ್ ಸ್ಫೋಟದ ಗಾಯಾಳು ಸ್ವರ್ಣಾಂಭಾಗೆ ಸತತ ನಾಲ್ಕು ತಾಸು ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ ಎಂದು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ। ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸರ್ಜರಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಗಾಯಾಳು ಸ್ವರ್ಣಾಂಭ ಅವರಿಗೆ ಸರ್ಜರಿ ಆಗಿದೆ. ದೇವರ ದಯೆಯಿಂದ ಸರ್ಜರಿ ಯಶಸ್ವಿಯಾಗಿದೆ. ಸತತ ನಾಲ್ಕು ತಾಸಿನ ಶ್ರಮದಿಂದ ನಾಲ್ವರು ಸರ್ಜನ್‌ಗಳು ಯಶಸ್ವಿಯಾಗಿ ಸರ್ಜರಿ ಮಾಡಿದ್ದಾರೆ ಎಂದರು.
ಕೆನ್ನೆ ಒಳಗೆ ಗಾಜಿನ ಚೂರು ಹೋಗಿತ್ತು. ಕೆನ್ನೆ ಹಾಗೂ ಎದೆ ಸೇರಿದಂತೆ ಹಲವು ಭಾಗಗಳಲ್ಲಿ ಸರ್ಜರಿ ಮಾಡಲಾಗಿದೆ. ಸ್ಫೋಟದಲ್ಲಿ ಸ್ವರ್ಣಾಂಭಾ ಅವರಿಗೆ ಶೇ.40ರಷ್ಟು ಗಾಯಗಳಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಒಂದು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯ ಸ್ಥಿರವಾದ ಬಳಿಕ ವಾರ್ಡ್‌ಗೆ ಶಿಫ್ಟ್ ಮಾಡುವುದಾಗಿ ಹೇಳಿದರು.
ಸ್ವರ್ಣಾಂಭಾ ಅವರಿಗೆ ಆಂತರಿಕ ಗಾಯಾಳುಗಳು ಆಗಿರುವ ಬಗ್ಗೆ ಸದ್ಯಕ್ಕೆ ತಿಳಿದು ಬಂದಿಲ್ಲ. ಮಧುಮೇಹಿ ಆಗಿರುವುದರಿಂದ ಗಾಯಗಳು ಒಣಗಲು ತಡವಾಗುತ್ತದೆ. ನಮ್ಮ ಕಡೆಯಿಂದ ಅವರಿಗೆ ಏನೆಲ್ಲಾ ಚಿಕಿತ್ಸೆ ನೀಡಬೇಕೋ ಎಲ್ಲವನ್ನೂ ಮಾಡಲಾಗುತ್ತದೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಾಯಾಳುಗಳ ಚಿಕಿತ್ಸಾ ವೆಚ್ಚದ ಭರಿಸುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ವೈದ್ಯರು ಪ್ರತಿಕ್ರಿಯಿಸಿದರು.
ಬಾಂಬ್ ಸ್ಫೋಟದ ಬೆನ್ನಲ್ಲೇ ನಗರದಲ್ಲಿ ತೀವ್ರ ಕಟ್ಟೆಚ್ಚರ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕುಂದನಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ನಗರ ಪೊಲೀಸರು ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಬಾಂಬ್ ಸ್ಫೋಟದ ಸುದ್ದಿ ಹೊರಬಿದ್ದ ಕೂಡಲೇ ನಗರ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ನಗರದ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಮೆಟ್ರೋ ರೈಲು ನಿಲ್ದಾಣಗಳು, ಮಾರುಕಟ್ಟೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಪ್ರದೇಶಗಳಲ್ಲಿ ನಿಗಾವಹಿಸಿದ್ದಾರೆ. ವಿಧಾನಸೌಧ, ಹೈಕೋರ್ಟ್, ವಿಕಾಸ ಸೌಧ, ರಾಜಭವನ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಜನನಿಬಿಡ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವವರು ಹಾಗೂ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾವಹಿಸಿದ್ದಾರೆ. ಅಂತೆಯೇ ಪೊಲೀಸರ ಗಸ್ತು ಹೆಚ್ಚಿಸಿ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಕಣ್ಣಿಡಲಾಗಿದೆ. ಇನ್ನು ಬಸ್ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪವಾಗಿ ಕಂಡುಬರುವ ಲಗೇಜ್‌ಗಳನ್ನು ತಪಾಸಣೆ ಮಾಡಲು ಸೂಚಿಸಲಾಗಿದೆ.
ಈಗಾಗಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟದ ಶಂಕಿತನ ಪತ್ತೆಗೆ ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಈ ನಡುವೆ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳದ ಜತೆಗೆ ಪ್ರತಿ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.