ಸಾರಾಂಶ
ಸಾಲದ ಹಣದ ವಿಚಾರವಾಗಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಜಗಳವಾಡಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಲದ ಹಣದ ವಿಚಾರವಾಗಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಜಗಳವಾಡಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ.ಕೊಡಿಗೆಹಳ್ಳಿ ಠಾಣೆ ಕಾನ್‌ಸ್ಠೇಬಲ್ ಗಂಗಪ್ಪ ಮತ್ತು ಕೆ.ಜಿ.ಹಳ್ಳಿ ಠಾಣೆ ಕಾನ್‌ಸ್ಟೇಬಲ್ ಮುಲ್ತಾನಿ ಪರಸ್ಪರ ಹೊಡೆದಾಡಿಕೊಂಡವರು ಎನ್ನಲಾಗಿದೆ. ಈ ಇಬ್ಬರೂ ಕಾನ್‌ಸ್ಟೇಬಲ್‌ಗಳು ಕಲಬುರಗಿ ಮೂಲದವರು. ಗಂಗಪ್ಪ ಈ ಹಿಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮುಲ್ತಾನಿ ಬಳಿ ₹40 ಸಾವಿರ ಸಾಲ ಪಡೆದಿದ್ದರು. ಬಳಿಕ ಗಂಗಪ್ಪ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ವರ್ಗವಾಗಿದ್ದರು.
ಮುಲ್ತಾನಿ ಸಾಲ ವಾಪಾಸ್ ಕೇಳಲು ಹಲವು ಬಾರಿ ಮೊಬೈಲ್‌ಗೆ ಕರೆ ಮಾಡಿದ್ದು, ಗಂಗಪ್ಪ ಕರೆ ಸ್ವೀಕರಿಸಿರಲಿಲ್ಲ. ಮೂರು ದಿನಗಳ ಹಿಂದೆ ಗಂಗಪ್ಪ ಕರ್ತವ್ಯದ ಮೇಲೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮುಲ್ತಾನಿ ಅವರು ಗಂಗಪ್ಪನನ್ನು ಠಾಣೆಯಿಂದ ಹೊರಗೆ ಕರೆದುಕೊಂಡು ಬಂದು ಸಾಲದ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಬಳಿಕ ಪೊಲೀಸರು ಹಾಗೂ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.