ತವರಿಗೆ ಹಣ ಕೊಟ್ಟ ಪತ್ನಿಯ ಕೊಂದ ಪತಿ; ಪ್ರಶ್ನಿಸಿದ ಮಕ್ಕಳಿಗೂ ಕೊಲೆ ಬೆದರಿಕೆ!

| Published : May 03 2024, 01:05 AM IST / Updated: May 03 2024, 05:28 AM IST

ತವರಿಗೆ ಹಣ ಕೊಟ್ಟ ಪತ್ನಿಯ ಕೊಂದ ಪತಿ; ಪ್ರಶ್ನಿಸಿದ ಮಕ್ಕಳಿಗೂ ಕೊಲೆ ಬೆದರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸಿನ ವಿಚಾರದ ಜಗಳದಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಕೊಲೆಯಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ದಾಬಸ್‌ಪೇಟೆ :  ಹಣಕಾಸಿನ ವಿಚಾರದ ಜಗಳದಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಕೊಲೆಯಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸೋಂಪುರ ಹೋಬಳಿಯ ಗೊಟ್ಟಿಗೆರೆ ಗ್ರಾಮದ ಜಯಲಕ್ಷ್ಮಿ(36) ಕೊಲೆಯಾದ ಮಹಿಳೆ. ಶ್ರೀನಿವಾಸ್ (42) ಕೊಲೆ ಆರೋಪಿ. ಶ್ರೀನಿವಾಸ್‌ ಅವರ ಒಂದೂವರೆ ಎಕರೆ ಜಮೀನು ಕಳೆದ ಒಂದು ವರ್ಷದ ಹಿಂದೆ ಅವೇರಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಎರಡು ಕೋಟಿಗೂ ಅಧಿಕ ಪರಿಹಾರ ಹಣ ಬಂದಿತ್ತು. ಈ ಹಣದಲ್ಲಿ ಕೊಲೆಗೀಡಾಗಿರುವ ಜಯಲಕ್ಷ್ಮಿ ಬಹುಪಾಲು ಹಣವನ್ನು ತವರು ಮನೆಗೆ ನೀಡಿದ್ದರು. ಈ ವಿಚಾರದಲ್ಲಿ ಆಗಾಗ ಪತಿಪತ್ನಿಯರ ನಡುವೆ ಜಗಳವಾಗುತ್ತಿತ್ತು.

ಏ.29ರಂದು ಬೆಳಗ್ಗೆ ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ವಾದವಿವಾದವಾಗಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಶ್ರೀನಿವಾಸ್ ಜಯಲಕ್ಷ್ಮಿ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ. ಶ್ರೀನಿವಾಸ್ ಮನೆ ಮುಂದೆ ಇದ್ದ ನೀರಿನ ಸಂಪ್‌ಗೆ ಶವವನ್ನು ಹಾಕಿದ್ದ. ಮಕ್ಕಳು ಪತ್ನಿಯನ್ನು ಪ್ರಶ್ನಿಸಿದಾಗ ಹುಡುಕುವ ನಾಟಕ ಆಡಿದ್ದಾನೆ. ಬಳಿಕ ಶವವನ್ನು ಹೂಳಲು ದೊಡ್ಡ ಗುಂಡಿ ತೆಗೆದಿದ್ದಾನೆ. ಇದನ್ನು ಮಕ್ಕಳು ಪ್ರಶ್ನಿಸಿದಾಗಲೂ ಗಿಡ ನೆಡಲು ಎಂದು ಯಾಮಾರಿಸಿದ್ದಾನೆ. ಮೇ 30ರಂದು ಬೆಳಗ್ಗೆ ಮೃತ ಮಹಿಳೆ ಮಗಳು ಸಂಪ್‌ನಲ್ಲಿ ನೀರು ತೆಗೆದುಕೊಳ್ಳಲು ಬಾಗಿಲು ತೆಗೆದಾಗ ತಾಯಿಯ ಶವ ಕಂಡಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಮಕ್ಕಳನ್ನು ಬೆದರಿಸಿದ್ದಾನೆ. ಆದರೂ ಮಕ್ಕಳು ತಾಯಿಯ ತವರು ಮನೆ, ಊರಿನವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.