ಸಾರಾಂಶ
ನಾಗಮಂಗಲ; ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆ ಕಣ್ಣ ಮುಂದೆಯೇ ಸಾವನ್ನಪ್ಪಿದ ದೃಶ್ಯ ನೋಡಿದ ಅತ್ತೆಯೂ ಕುಸಿದು ಬಿದ್ದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಸಂಭವಿಸಿದೆ. ತಾಲೂಕಿನ ಕಾಡ ಅಂಕನಹಳ್ಳಿ ನಂಜುಂಡೇಗೌಡರ ಪತ್ನಿ ಹುಚ್ಚಮ್ಮ(80) ಮತ್ತು ಕಲ್ಯಾಣಗೌಡರ ಪತ್ನಿ ಸುಶೀಲಮ್ಮ(46) ಎಂಬುವರೇ ಬೆಂಗಳೂರಿನಲ್ಲಿ ಒಂದೇ ದಿನ ಸಾವನ್ನಪ್ಪಿರುವ ಅತ್ತೆ ಸೊಸೆಯಾಗಿದ್ದಾರೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಕಲ್ಯಾಣಗೌಡರ ಪತ್ನಿ ಸುಶೀಲಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಆರ್ಥಿಕ ಸಮಸ್ಯೆ ಹಿನ್ನಲೆಯಲ್ಲಿ ಸುಶೀಲಮ್ಮ ನವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ರೋಗಿಯ ಪೋಷಕರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸ್ಸು ಮಾಡಿದ್ದರು. ಸುಶೀಲಮ್ಮ ಅವರನ್ನು ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸುಶೀಲಮ್ಮ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ತನ್ನ ಸೊಸೆ ಸಾವನ್ನಪ್ಪಿದ್ದ ದೃಶ್ಯ ನೋಡಿದ ಅತ್ತೆ ಹುಚ್ಚಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಇವರನ್ನು ಸಮೀಪದ ಕಾಮಾಕ್ಷಿಪಾಳ್ಯದ ಲಕ್ಷ್ಮಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದರು. ಗುರುವಾರ ಸಂಜೆ ಅತ್ತೆ ಮತ್ತು ಸೊಸೆಯ ಮೃತದೇಹಗಳನ್ನು ಸ್ವಗ್ರಾಮ ತಾಲೂಕಿನ ಕಾಡ ಅಂಕನಹಳ್ಳಿಗೆ ತಂದು ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಎರಡೂ ಮೃತದೇಹಗಳನ್ನು ಒಟ್ಟಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅತ್ತೆ ಮತ್ತು ಸೊಸೆಯ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಕಾಡಅಂಕನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
---24ಕೆಎಂಎನ್ ಡಿ35
ಮೃತಪಟ್ಟ ಅತ್ತೆ, ಸೊಸೆ.----------