ಸಂಪ್‌ ಬಿದ್ದ ಮಗನ ರಕ್ಷಿಸಲು ಹೋದ ತಾಯಿಯೂ ಸಾವು

| Published : Apr 19 2024, 01:34 AM IST / Updated: Apr 19 2024, 05:22 AM IST

ಸಾರಾಂಶ

ಯಲಹಂಕದ ನ್ಯೂಟೌನ್‌ನಲ್ಲಿ ಆಟ ಆಡುವಾಗ ಸಂಪ್‌ಗೆ ಬಿದ್ದ ಮಗನನ್ನು ರಕ್ಷಿಸಲು ಸಂಪ್‌ಗೆ ಇಳಿದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

 ಬೆಂಗಳೂರು :  ತಾಯಿ ಮತ್ತು ಮಗು ಸಂಪ್‌ಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಗ್ಗಪ್ಪ ಲೇಔಟ್‌ನ ಕವಿತಾ (30) ಮತ್ತು ಪವನ್‌ (6) ಮೃತ ದುರ್ದೈವಿಗಳು. ಗುರುವಾರ ಸಂಜೆ ಸುಮಾರು 6 ಗಂಟೆಗೆ ಈ ದುರ್ಘಟನೆ ನಡೆದಿದೆ.

ಗೌರಿಬಿದನೂರು ಮೂಲದ ಕವಿತಾ ಪತಿಯಿಂದ ದೂರವಾಗಿದ್ದು, ಪುತ್ರನ ಜತೆಗೆ ಸುಗ್ಗಪ್ಪ ಲೇಔಟ್‌ನಲ್ಲಿ ನೆಲೆಸಿದ್ದರು. ವಸುಂಧರಾ ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಮನೆಯ ಬಳಿಯೇ ಕವಿತಾ ಪುತ್ರನೊಂದಿಗೆ ಉಳಿದುಕೊಂಡಿದ್ದರು. ಗುರುವಾರ ಸಂಜೆ ಕವಿತಾ ಪುತ್ರ ಪವನ್‌ ಹಾಗೂ ಅಕ್ಕನ ಮಗಳು ಆಟವಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಪಕ್ಕದ ಖಾಲಿ ಜಾಗದಲ್ಲಿ ಸುಮಾರು 10 ಅಡಿ ಅಳದ ಸಂಪ್‌ ಇದ್ದು, ಪವನ್‌ ಆಯತಪ್ಪಿ ಆ ಸಂಪ್‌ಗೆ ಬಿದ್ದಿದ್ದಾನೆ.

ಆಗ ಬಾಲಕಿ ಜೋರಾಗಿ ಕಿರುಚಿದ ಪರಿಣಾಮ ಮನೆಗೆಲಸದಲ್ಲಿ ತೊಡಗಿದ್ದ ಕವಿತಾ ಓಡಿ ಬಂದು ಪವನ್‌ನನ್ನು ಸಂಪ್‌ನಿಂದ ಮೇಲೆತ್ತಲು ಮುಂದಾಗಿದ್ದಾರೆ. ಈ ವೇಳೆ ಆಕೆಯೂ ನಿಯಂತ್ರಣ ತಪ್ಪಿ ಸಂಪ್‌ ಒಳಗೆ ಬಿದ್ದಿದ್ದಾರೆ. ಹೀಗಾಗಿ ತಾಯಿ-ಮಗು ಇಬ್ಬರೂ ಸಂಪ್‌ನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಖಾಲಿ ಜಾಗದ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿರುವ ಯಲಂಹಕ ನ್ಯೂಟೌನ್‌ ಠಾಣೆ ಪೊಲೀಸ್‌ ಠಾಣೆ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.