ಸಾರಾಂಶ
ಬೆಂಗಳೂರು : ಗ್ರಾಹಕರ ಸೋಗಿನಲ್ಲಿ ತೆರಳಿ ರೇಷ್ಮೆ ಸೀರೆಗಳನ್ನು ಕದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಚಾಲಾಕಿ ಕಳ್ಳಿಯರ ತಂಡವನ್ನು ಸೆರೆ ಹಿಡಿದು ಪೊಲೀಸರಿಗೆ ಸೀರೆ ಅಂಗಡಿಯೊಂದರ ಸಿಬ್ಬಂದಿ ಒಪ್ಪಿಸಿರುವ ಘಟನೆ ಜೆ.ಪಿ.ನಗರ ಸಮೀಪ ನಡೆದಿದೆ.
ಆಂಧ್ರಪ್ರದೇಶ ಮೂಲದ ಜಾನಕಿ, ಪೊನ್ನೂರು ಮಲ್ಲಿ, ಮೇದ ರಜನಿ ಹಾಗೂ ವೆಂಕಟೇಶ್ವರಮ್ಮ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ ₹17.5 ಲಕ್ಷ 38 ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಜೆ.ಪಿ.ನಗರದ ಚಿನ್ಮಯಿ ಸಿಲ್ಕ್ ಹೌಸ್‌ಗೆ ಸೀರೆ ಖರೀದಿಸುವ ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಆರೋಪಿಗಳು, ಆ ಅಂಗಡಿಯ ಕೆಲಸಗಾರರ ಗಮನ ಬೇರೆಡೆ ಸೆಳೆದು 10 ರೇಷ್ಮೆ ಸೀರೆಗಳನ್ನು ಕಳವು ಮಾಡಿದ್ದಾರೆ. ಆದರೆ ಅಲ್ಲಿಂದ ತೆರಳುವಾಗ ಈ ಮಹಿಳೆಯರ ಮೇಲೆ ಶಂಕೆಗೊಂಡ ಅಂಗಡಿ ಮಾಲೀಕ, ಕೂಡಲೇ ಅವರನ್ನು ತಡೆದು ಮಹಿಳಾ ಸಿಬ್ಬಂದಿ ಮೂಲಕ ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ.
ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-122)ಗೆ ಕರೆ ಮಾಡಿ ಅಂಗಡಿ ಮಾಲೀಕರು ಮಾಹಿತಿ ನೀಡಿದ್ದಾರೆ. ತಿಳಿದು ತಕ್ಷಣವೇ ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.ಈ ಆರೋಪಿಗಳನ್ನು ಠಾಣೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದಾಗ ಜೆ.ಪಿ.ನಗರದ ಮುಗ್ದ ಹಾಗೂ ಜಯನಗರದ ಸಿಲ್ಕ್ ಹೌಸ್‌ಗಳಲ್ಲಿ ನಡೆದಿದ್ದ ಸೀರೆ ಕಳ್ಳತನ ಕೃತ್ಯಗಳು ಪತ್ತೆಯಾಗಿವೆ. ಈ ಅಂಗಡಿಗಳಲ್ಲಿ ಕಳವು ಮಾಡಿದ್ದ 28 ಸೀರೆಗಳನ್ನು ಕೋರಮಂಗಲದಲ್ಲಿದ್ದ ತಮ್ಮ ಸ್ನೇಹಿತನಿಗೆ ಆರೋಪಿಗಳು ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಸೀರೆಯೊಳಗೆ ಸೀರೆ ಅಡಗಿಸಿಟ್ಟು ವಂಚನೆ!
ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ತಂಡದ ವಿರುದ್ಧ ಆಂಧ್ರಪ್ರದೇಶ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸೀರೆ ಅಂಗಡಿಗಳಲ್ಲಿ ದುಬಾರಿ ಮೌಲ್ಯದ ರೇಷ್ಮೆ ಸೀರೆಗಳನ್ನು ಕಳವು ಮಾಡಿ ಬಳಿಕ ಅವುಗಳನ್ನು ಕಡಿಮೆ ಮಾರಾಟ ಮಾಡುವುದು ಈ ತಂಡದ ಕೃತ್ಯವಾಗಿದೆ.
ಈ ನಾಲ್ವರು ಮಹಿಳೆಯರನ್ನು ಕಾರಿನಲ್ಲಿ ಸೀರೆ ಅಂಗಡಿಗಳ ಬಳಿ ಈ ಜಾಲದ ಮಾಸ್ಟರ್ ಮೈಂಡ್‌ಗಳು ಬಿಟ್ಟು ತೆರಳುತ್ತಾರೆ. ಪೂರ್ವನಿಗದಿತ ಸೀರೆ ಅಂಗಡಿಗೆ ಹೋಗಿ ಸೀರೆ ಖರೀದಿಸುವಂತೆ ನಟಿಸಿ ಕೆಲಸಗಾರರ ಗಮನ ಬೇರೆ ಸೆಳೆದು ರೇಷ್ಮೆ ಸೀರೆಗಳನ್ನು ಎಗರಿಸಿ ತಾವು ಧರಿಸಿದ್ದ ಸೀರೆಗಳಲ್ಲಿ ಆರೋಪಿಗಳು ಅಡಗಿಸಿಕೊಳ್ಳುತ್ತಿದ್ದರು. ನಂತರ ತಮಗೆ ಸೀರೆ ಇಷ್ಟವಾಗಲಿಲ್ಲವೆಂದು ಹೇಳಿ ಹೊರಬರುತ್ತಿದ್ದರು. ಹೀಗೆ ಕದ್ದ ಸೀರೆಗಳನ್ನು ಕೂಡಲೇ ಆ ಅಂಗಡಿ ಸಮೀಪದಲ್ಲೇ ಇರುತ್ತಿದ್ದ ತಮ್ಮ ತಂಡದ ಇತರೆ ಸದಸ್ಯರಿಗೆ ರವಾನಿಸುತ್ತಿದ್ದರು ಎಂದು ಜೆ.ಪಿ.ನಗರ ಪೊಲೀಸರು ಹೇಳಿದ್ದಾರೆ.