ಸಾರಾಂಶ
ಬೆಂಗಳೂರು : ರೆಸಾರ್ಟ್‌ವೊಂದರಲ್ಲಿ ಇತ್ತೀಚೆಗೆ ಮಹಿಳಾ ಗ್ರಾಹಕಿಯ ಚಿನ್ನಾಭರಣ ಕಳವು ಮಾಡಿದ್ದ ರೂಮ್ ಬಾಯ್‌ನನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತರಹುಣಸೆ ನಿವಾಸಿ ವೆಂಕಟೇಶ್ (28) ಬಂಧಿತ. ಆರೋಪಿಯಿಂದ 3.10 ಲಕ್ಷ ರು. ಮೌಲ್ಯದ 53 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಖಾಸಗಿ ವಿಮಾ ಕಂಪನಿಯ ಬಿಜಿನೆಸ್ ಹೆಡ್ ಆಗಿರುವ ಮಹಿಳೆಯೊಬ್ಬರು ಮೀಟಿಂಗ್ ಸಂಬಂಧ ಡಿ.12ರಂದು ಸಾದಹಳ್ಳಿ ಗೇಟ್ ಸಮೀಪದ ರೆಸಾರ್ಟ್‌ವೊಂದರಲ್ಲಿ ತಂಗಿದ್ದರು. ರಾತ್ರಿ ಮಲಗುವ ವೇಳೆ ಮಾಂಗಲ್ಯ ಸರ, ಎರಡು ಉಂಗುರ ಹಾಗೂ ವಾಚ್ ಬಿಚ್ಚಿ ತಲೆದಿಂಬಿನ ಕೆಳಗೆ ಇರಿಸಿದ್ದರು. ಮಾರನೇ ದಿನ ಮೀಟಿಂಗ್ ಹಿನ್ನೆಲೆಯಲ್ಲಿ ಆತುರವಾಗಿ ರೂಮ್ ಖಾಲಿ ಮಾಡಿಕೊಂಡು ತೆರಳಿದ್ದಾರೆ. ಮೀಟಿಂಗ್ ವೇಳೆ ಚಿನ್ನಾಭರಣ ನೆನಪಾಗಿ ರೆಸಾರ್ಟ್‌ನ ರೂಮ್‌ಗೆ ಬಂದು ನೋಡಿದಾಗ ಚಿನ್ನಾಭರಣ ಇರಲಿಲ್ಲ. ಈ ಸಂಬಂಧ ವಿಚಾರ ಮಾಡಿದಾಗ ರೆಸಾರ್ಟ್ ಸಿಬ್ಬಂದಿ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವೆಂಕಟೇಶ್ ಆ ರೆಸಾರ್ಟ್‌ನಲ್ಲಿ ರೂಮ್ ಬಾಯ್ ಕೆಲಸ ಮಾಡಿಕೊಂಡಿದ್ದ. ಮಹಳೆ ರೂಮ್ ಖಾಲಿ ಮಾಡಿಕೊಂಡು ಮೀಟಿಂಗ್‌ಗೆ ತೆರಳಿದ್ದ ವೇಳೆ ರೂಮ್‌ಗೆ ಬಂದಿದ್ದ ವೆಂಕಟೇಶ್, ತಲೆದಿಂಬಿನ ಕೆಳಗೆ ಚಿನ್ನಾಭರಣ ಇರುವುದನ್ನು ಗಮನಿಸಿ ಕಳವು ಮಾಡಿದ್ದಾನೆ. ತನಿಖೆ ವೇಳೆ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿಯಿಂದ ಚಿನ್ನಾಭರಣ ಹಾಗೂ ವಾಚ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.