ಶಿಂಷಾ ನದಿ ಪಾತ್ರದಲ್ಲಿ ದುಷ್ಕರ್ಮಿಗಳಿಂದ ಮೋಟಾರ್ ಪಂಪ್ ಸೆಟ್‌ಗಳ ಕಳವು

| Published : Apr 20 2024, 01:04 AM IST / Updated: Apr 20 2024, 06:04 AM IST

ಶಿಂಷಾ ನದಿ ಪಾತ್ರದಲ್ಲಿ ದುಷ್ಕರ್ಮಿಗಳಿಂದ ಮೋಟಾರ್ ಪಂಪ್ ಸೆಟ್‌ಗಳ ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಶಿಂಷಾ ನದಿ ಪಾತ್ರದಲ್ಲಿ ಹಾಗೂ ತಮ್ಮ ಜಮೀನಿನ ಬಾವಿಗಳಲ್ಲಿ ರೈತರು ತಮ್ಮ ಬೆಳೆ ರಕ್ಷಣೆಗಾಗಿ ನೀರು ಹಾಯಿಸಲು ಅಳವಡಿಸಿದ್ದ ಪಂಪ್ ಸೆಟ್ ಗಳನ್ನು ಕಳ್ಳರು ರಾತ್ರಿ ವೇಳೆ ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.  

 ಮದ್ದೂರು :  ಶಿಂಷಾ ನದಿ ಪಾತ್ರದಲ್ಲಿ ಬೆಳೆಗಳಿಗೆ ನೀರು ಹಾಯಿಸಲು ರೈತರು ಅಳವಡಿಸಿಕೊಂಡಿದ್ದ ಮೋಟಾರ್ ಪಂಪ್ ಸೆಂಟ್‌ಗಳನ್ನು ದುಷ್ಕರ್ಮಿಗಳ ಗುಂಪೊಂದು ಕಳವು ಮಾಡಿರುವ ಪ್ರಕರಣ ತಾಲೂಕಿನ ಕೆ.ಕೋಡಿಹಳ್ಳಿ ಬಳಿ ಗುರುವಾರ ರಾತ್ರಿ ಜರುಗಿದೆ.

ಗ್ರಾಮದ ಶಿವರಾಜು ಹಾಗೂ ಜಯರಾಮ ಅವರಿಗೆ ಸೇರಿದ ಸುಮಾರು 1.20 ಲಕ್ಷ ರು. ಮೌಲ್ಯದ ಎರಡು ಪಂಪ್ ಸೆಟ್ ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಬರಗಾಲದಿಂದ ಶಿಂಷಾ ನದಿಯಲ್ಲಿ ನೀರಿಲ್ಲದ ಕಾರಣ ಶಿವರಾಜು ಹಾಗೂ ಜಯರಾಮ್ ನದಿಹಳ್ಳದಲ್ಲಿ ಶೇಖರಣೆಗೊಂಡಿದ್ದ ಅಲ್ಪಸ್ವಲ್ಪ ನೀರನ್ನು ಪಂಪ್ ಸೆಟ್ ಮೂಲಕ ಹಾಯಿಸಿಕೊಂಡು ತಮ್ಮ ಬತ್ತದ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದರು.

ಗುರುವಾರ ರಾತ್ರಿ 11 ಗಂಟೆವರೆಗೆ ನೀರು ಹಾಯಿಸಿಕೊಂಡಿದ್ದ ಶಿವರಾಜು ಮತ್ತು ಜಯರಾಮು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಮನೆಗೆ ತೆರಳಿದ್ದರು. ಬೆಳಗ್ಗೆ ಜಮೀನ ಬಳಿ ಬಂದು ನೋಡಿದಾಗ ಪಂಪ್ ಸೆಟ್ ಗಳು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿಂಷಾ ನದಿ ಪಾತ್ರದಲ್ಲಿ ಹಾಗೂ ತಮ್ಮ ಜಮೀನಿನ ಬಾವಿಗಳಲ್ಲಿ ರೈತರು ತಮ್ಮ ಬೆಳೆ ರಕ್ಷಣೆಗಾಗಿ ನೀರು ಹಾಯಿಸಲು ಅಳವಡಿಸಿದ್ದ ಪಂಪ್ ಸೆಟ್ ಗಳನ್ನು ಕಳ್ಳರು ರಾತ್ರಿ ವೇಳೆ ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಳೆ ನೀರು ಹೊರ ಹಾಕಲು ಅಳವಡಿಸಲಾಗಿದ್ದ ಕಬ್ಬಿಣದ ಪೈಪ್‌ಗಳನ್ನು ಮತ್ತು ತಂತಿ ಬೇಲಿಗಳನ್ನು ಕಳವು ಪ್ರಕರಣಗಳು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂಬ ರೀತಿ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.