ಸಾರಾಂಶ
ಬೆಂಗಳೂರು : ಇತ್ತೀಚೆಗೆ ಹಾಡಹಗಲೇ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ನಿವಾಸಿ ಆಫ್ರಿದಿ(25) ಬಂಧಿತ. ಆರೋಪಿಯು ಸೆ.28ರಂದು ಬಸವನಗುಡಿ ಉತ್ತರಾದಿಮಠ ರಸ್ತೆಯ ಸಮೀರ್ ಆರ್.ಕಟ್ಟಿ ಅವರ ಮನೆಗೆ ನುಗ್ಗಿ ₹67 ಸಾವಿರ ನಗದು ಹಾಗೂ 20 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ದೂರುದಾರ ಸಮೀರ್ ಅವರ ಮನೆಯಲ್ಲಿ ಸೆ.28ರಂದು ಏಕಾದಶಿ ಪ್ರಯುಕ್ತ ತಾಯಿ ಹಾಗೂ ಅವರ ಸ್ನೇಹಿತೆಯರು ಅಡುಗೆ ಕೋಣೆಯಲ್ಲಿ ರಾಮಭಜನೆ ಮಾಡುತ್ತಿದ್ದರು. ಸಮೀರ್ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿದ್ದರು. ಇವರ ತಂದೆ ರಾಮಚಾರ್ ಕಟ್ಟಿ ಅವರು ಕೋಣೆಯೊಂದರಲ್ಲಿ ಗಾಢ ನಿದ್ದೆಯಲ್ಲಿದ್ದರು. ಈ ವೇಳೆ ಮನೆಯ ಬಾಗಿಲು ತೆರೆದಿತ್ತು.
ಗಾಢ ನಿದ್ದೆಯಲ್ಲಿದ್ದ ಕೋಣೆಗೆ ನುಗ್ಗಿ ಮೊಬೈಲ್ ಕದ್ದ: ಮಧ್ಯಾಹ್ನ ಸುಮಾರು 3.40ಕ್ಕೆ ಅಪರಿಚಿತ ವ್ಯಕ್ತಿ ಮನೆ ಪ್ರವೇಶಿಸಿದ್ದು, ಸಮೀರ್ ಅವರ ತಂದೆ ನಿದ್ದೆ ಮಾಡುತ್ತಿದ್ದ ಕೊಠಡಿಗೆ ತೆರಳಿ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಸಂಜೆ ಸಮೀರ್ ತಂದೆ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ಮೊಬೈಲ್ ಕಾಣಿಸಿಲ್ಲ. ಬಳಿಕ ಪುತ್ರ ಸಮೀರ್‌ಗೆ ಮೊಬೈಲ್ ಕಾಣಿಸದಿರುವ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ಸಮೀರ್ ಅವರು ಮನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಯ ದುಷ್ಕೃತ್ಯ ಸೆರೆಯಾಗಿತ್ತು. ಈ ಸಂಬಂಧ ಶಂಕರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಆರೋಪಿ ಅಫ್ರೀದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.