ಕಿಟಕಿ ಕತ್ತರಿಸಿ ₹90 ಲಕ್ಷದ ಚಿನ್ನ ಕದ್ದೊಯ್ದ ಕಳ್ಳರು

| Published : Feb 09 2024, 01:52 AM IST / Updated: Feb 09 2024, 08:46 AM IST

 Thief
ಕಿಟಕಿ ಕತ್ತರಿಸಿ ₹90 ಲಕ್ಷದ ಚಿನ್ನ ಕದ್ದೊಯ್ದ ಕಳ್ಳರು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ನೆಲೆಸಿದ್ದ ರಾಜಸ್ಥಾನದ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಗ್ರಿಲ್‌ ಕತ್ತರಿಸಿ ₹90 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಕಿಟಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಮನೆ ಪ್ರವೇಶಿಸಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು, ಈ ಸಂಬಂಧ ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಷಾದ್ರಿಪುರ ಗರ್ಲ್‌ ಸ್ಕೂಲ್‌ ಸ್ಟ್ರೀಟ್‌ನ ನಿವಾಸಿ ಮಂಜುಳಾ ದೇವಿ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಮಂಜುಳಾ ದೇವಿ ಅವರು ದೇವರ ಕಾರ್ಯ ನಿಮಿತ್ತ ಕುಟುಂಬ ಸಮೇತ ಜ.17ರಂದು ಸಂಜೆ ಸ್ವಂತ ಊರು ರಾಜಸ್ಥಾನಕ್ಕೆ ತೆರಳಿದ್ದರು. ಫೆ.4ರಂದು ಮಧ್ಯಾಹ್ನ 2.30ರ ಸುಮಾರಿಗೆ ರಾಜಸ್ಥಾನದಿಂದ ಮನೆಗೆ ವಾಪಾಸ್‌ ಬಂದಾಗ, ಮನೆಯ ಕಿಟಕಿಯ ಗ್ರಿಲ್‌ ತುಂಡಾಗಿರುವುದು ಕಂಡು ಬಂದಿದೆ.

ಮನೆ ಪ್ರವೇಶಿಸಿ ಪರಿಶೀಲಿಸಿದಾಗ ದುಷ್ಕರ್ಮಿಗಳು ಬೆಡ್‌ ರೂಮ್‌ನ ಕಬೋರ್ಡ್‌ಗಳ ಬಾಗಿಲು ಒಡೆದು ಲಾಕರ್‌ನಲ್ಲಿದ್ದ ಸುಮಾರು ₹90 ಲಕ್ಷ ಮೌಲ್ಯದ 2 ಕೆ.ಜಿ. 250 ಗ್ರಾಂ ತೂಕದ ಚಿನ್ನದ ಬಿಸ್ಕತ್‌, ಚಿನ್ನಾಭರಣಗಳು, ಬೆಳ್ಳಿ ಲೋಟಗಳು ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. 

ಈ ಸಂಬಂಧ ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.