ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪ್ರಾಧ್ಯಾಪಕನ ಹಲ್ಲೆಗೈದ ಮೂವರ ಬಂಧನ

| N/A | Published : Apr 28 2025, 01:30 AM IST / Updated: Apr 28 2025, 06:01 AM IST

ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪ್ರಾಧ್ಯಾಪಕನ ಹಲ್ಲೆಗೈದ ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಕುಳಿತು ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ‌.

  ಬೆಂಗಳೂರು: ಇತ್ತೀಚೆಗೆ ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಕುಳಿತು ರಸ್ತೆಗೆ ಕಸ ಎಸೆದಿದ್ದನ್ನು ಪ್ರಶ್ನಿಸಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ‌.ಕುಮಾರಸ್ವಾಮಿ ಲೇಔಟ್‌ನ ಭಾನುಪ್ರಸಾದ್ (26), ಶರತ್ (23) ಹಾಗೂ ಅಮೃತ್ ಕುಮಾರ್ (24) ಬಂಧಿತರು. ಆರೋಪಿಗಳು ಏ.21ರಂದು ಜೆಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಪ್ರಕರಣದ ಹಿನ್ನೆಲೆ:

ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಏ.21ರಂದು ಜೆಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಇವರ ಮುಂದೆ ಆಟೋದಲ್ಲಿ ಹೋಗುತ್ತಿದ್ದ ಮೂವರು ಆಟೋದೊಳಗೆ ಕುಳಿತು ಕಸ ಹಾಗೂ ಗಾಜಿನ ಚೂರುಗಳನ್ನು ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಅರಬಿಂದೋ ಗುಪ್ತಾ ಅವರು ಈ ರೀತಿ ರಸ್ತೆಗೆ ಕಸ ಎಸೆದರೆ ಇತರೆ ವಾಹನಗಳು ಸ್ಕಿಡ್‌ ಆಗುತ್ತವೆ ಎಂದು ಆರೋಪಿಗಳಿಗೆ ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿಗಳು ಅರಬಿಂದೋ ಗುಪ್ತಾ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಹಲ್ಲೆಗೊಳಗಾದ ಅರಬಿಂದೋ ಗುಪ್ತಾ ವಿಡಿಯೋವೊಂದನ್ನು ಮಾಡಿ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ್ದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ ವೇಳೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.