ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಚಾಕು ಇರಿದಿದ್ದ ವಿವಾಹಿತ ಬಂಧನ

| N/A | Published : Apr 27 2025, 01:33 AM IST / Updated: Apr 27 2025, 04:18 AM IST

jail

ಸಾರಾಂಶ

ಈ ಹಿಂದೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ್ದಲ್ಲದೇ ಇತ್ತೀಚೆಗೆ ಆಕೆ ಮತ್ತು ಆಕೆಯ ಸ್ನೇಹಿತ ಬಸ್‌ ನಿಲ್ದಾಣದಲ್ಲಿ ಕುಳಿತಿರುವಾಗ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಈ ಹಿಂದೆ ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ್ದಲ್ಲದೇ ಇತ್ತೀಚೆಗೆ ಆಕೆ ಮತ್ತು ಆಕೆಯ ಸ್ನೇಹಿತ ಬಸ್‌ ನಿಲ್ದಾಣದಲ್ಲಿ ಕುಳಿತಿರುವಾಗ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮಲಾನಗರ ನಿವಾಸಿ ಶ್ರೀಕಾಂತ್‌ (36) ಬಂಧಿತ. ಆರೋಪಿಯು ಏ.8ರಂದು ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಬಸ್‌ ನಿಲ್ದಾಣದಲ್ಲಿ ಸ್ನೇಹಿತನ ಜತೆಗೆ ಬಸ್‌ಗೆ ಕಾಯುತ್ತಾ ಕುಳಿತ್ತಿದ್ದ 21 ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಯುವತಿ ಒಂದು ವರ್ಷದ ಹಿಂದೆ ಕಮಲಾನಗರದಲ್ಲಿರುವ ಆರೋಪಿ ಶ್ರೀಕಾಂತ್‌ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ವಿವಾಹಿತನಾಗಿರುವ ಶ್ರೀಕಾಂತ್‌ ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಈತನ ಕಾಟ ತಾಳಲಾರದೆ ಬಸವೇಶ್ವರನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ಆತನ ಪತ್ನಿಯ ಮನವಿ ಮೇರೆಗೆ ಪ್ರಕರಣ ಹಿಂಪಡೆದಿದ್ದರು. ಪೊಲೀಸರು ಆಕೆಯ ಸಹವಾಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದರು.

ಮತ್ತೆ ಬೆನ್ನುಬಿದ್ದಿದ್ದ:

ಬಳಿಕ ಯುವತಿ ಆರೋಪಿಯ ಮನೆಯ ಖಾಲಿ ಮಾಡಿಕೊಂಡು ಕುರುಬರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೂರು ತಿಂಗಳ ಕಾಲ ಸುಮ್ಮನಿದ್ದ ಆರೋಪಿ ಶ್ರೀಕಾಂತ್‌ ಮತ್ತೆ ತನ್ನನ್ನು ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ. ಯುವತಿ ಕಾಲೇಜು ಕ್ಯಾಂಪಸ್‌ ವರೆಗೂ ಹಿಂಬಾಲಿಸಿ ಕಾಟ ನೀಡಲು ಆರಂಭಿಸಿದ್ದ. ಏ.8ರಂದು ಯುವತಿ ಹಾಗೂ ಆಕೆಯ ಸ್ನೇಹಿತ ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದಿರುವ ಆರೋಪಿ ಶ್ರೀಕಾಂತ್‌ ಹಲ್ಲೆ ಮಾಡಿ ಪರಾರಿಯಾಗಿದ್ದ.

ಬಾಕ್ಸ್‌ ಕಟರ್‌ನಿಂದ ಮಾರಣಾಂತಿಕ ಹಲ್ಲೆ:

ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಬಂದ ಆರೋಪಿ ಶ್ರೀಕಾಂತ್‌, ನೀನು ಈತನನ್ನು ಪ್ರೀತಿಸುತ್ತಿರುವುದಕ್ಕೆ ನನ್ನ ಪ್ರೀತಿ ನಿರಾಕರಿಸುತ್ತಿರುವೆಯಾ ಎಂದು ಯುವತಿಗೆ ಪ್ರಶ್ನಿಸಿ, ಏಕಾಏಕಿ ತನ್ನ ಜೇಬಿನಲ್ಲಿದ್ದ ಬಾಕ್ಸ್‌ ಕಟರ್‌ ತೆಗೆದು ಯುವತಿ ಹಾಗೂ ಆಕೆಯ ಜತೆಗಿದ್ದ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಸ್ಥಳೀಯರು ಇಬ್ಬರು ಗಾಯಾಳುಗಳ ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.