ಸಾರಾಂಶ
ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಚ್‌ಎಎಲ್ ವಿಭೂತಿಪುರ ನಿವಾಸಿಗಳಾದ ಭರತ್, ವಿಘ್ನೇಶ್ ಹಾಗೂ ಜೋಯೆಲ್ ಅಭಿಷೇಕ್ ಬಂಧಿತರು. ಆರೋಪಿಗಳಿಂದ ನಾಲ್ಕು ದ್ವಿಚಕ್ರ ವಾಹನ ಹಾಗೂ ತಲ್ವಾರ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಆ.4 ಮತ್ತು ಆ.21ರಂದು ರಾತ್ರಿ ಎಚ್‌ಎಎಲ್‌ನ ಕೋನೇನ ಅಗ್ರಹಾರದಲ್ಲಿ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲ್ವಾರ್ ಹಿಡಿದು ಓಡಾಟ:
ಆರೋಪಿಗಳು ಅಪರಾಧ ಹಿನ್ನೆಲೆ ಹೊಂದಿದ್ದು, ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದರು. ಫುಡ್ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು. ಕೈಯಲ್ಲಿ ತಲ್ವಾರ್ ಹಿಡಿದು ಓಡಾಡುತ್ತಿದ್ದ ಆರೋಪಿಗಳು ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ಬೆದರಿಸಿ, ಹಣ, ಮೊಬೈಲ್, ತಿನಿಸುಗಳು, ಊಟ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದರು.
ಸಿಸಿಟಿವಿ ಸುಳಿವು ಆಧರಿಸಿ ಬಂಧನ
ಪ್ರಕರಣದ ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕೆ.ಆರ್.ಪುರ, ಎಚ್‌ಎಎಲ್, ಜೀವನಭೀಮಾನಗರ, ಬೆಳ್ಳಂದೂರು ಸೇರಿದಂತೆ ನಗರದ ವಿವಿಧೆಡೆ ದರೋಡೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಗ್ಯಾಂಗ್‌ನ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.