ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾವು ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ತೆರಳುತ್ತಿದ್ದ ಕೆಲಸದಾಳು ದಂಪತಿ ಸೇರಿ ಮೂವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಿಂಗಸಂದ್ರದ ನಿವಾಸಿಗಳಾದ ಸುಶ್ಮಿತಾ ದಾಸ್, ಆಕೆಯ ಪತಿ ರಂಜನ್ ದಾಸ್, ಭಾವ ಮೋಂಟು ದಾಸ್ ಬಂಧಿತರಾಗಿದ್ದು, ಆರೋಪಿಗಳಿಂದ ₹22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹72 ಸಾವಿರ ಹಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳಿಂದೆ ಸಿಂಗಸಂದ್ರದ ತಿರುಮಲ ಸರೋವರ ಅಪಾರ್ಟ್‌ಮೆಂಟ್ ನಿವಾಸಿ ಸಾಫ್ಟ್‌ವೇರ್ ಉದ್ಯೋಗಿ ವಿಫುಲ್ ಫ್ಲ್ಯಾಟ್‌ನಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು, ಕೂಡಲೇ ಮೊಬೈಲ್ ಲೋಕೇಶನ್ ಆಧರಿಸಿ ಹೊಸಕೋಟೆ ಸಮೀಪ ಮನೆಕೆಲಸದಾಳು ಕುಟುಂಬವನ್ನು ಸೆರೆ ಹಿಡಿದಿದೆ.ಅಸ್ಸಾಂ ಮೂಲದ ಸುಶ್ಮಿತಾ ದಾಸ್ ದಂಪತಿ, ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದರು. ಬಳಿಕ ಸಿಂಗಸಂದ್ರದ ಐಟಿ ಉದ್ಯೋಗಿ ವಿಫುಲ್ ಅವರಿಗೆ ಸೇರಿದ 2 ಫ್ಲ್ಯಾಟ್‌ಗಳಲ್ಲಿ ಸುಶ್ಮಿತಾ ಕೆಲಸ ಮಾಡುತ್ತಿದ್ದಳು. ಆಗ ಆ ಮನೆಯ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಂಡ ಆಕೆ, ತನ್ನ ಪತಿ ರಂಜನ್ ಹಾಗೂ ಭಾವ ಮೋಟು ದಾಸ್ ಜತೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದಳು. ಅಂತೆಯೇ ಜ.27ರಂದು ಮನೆಯೊಡರಿಗೆ ಗೊತ್ತಾಗದಂತೆ ಚಿನ್ನಾಭರಣ ಕಳ್ಳತನ ಮಾಡಿದ್ದಳು.
ಸಿಕ್ಕಿಬಿದ್ದಿದ್ದು ಹೇಗೆ?ಮನೆಯಲ್ಲಿ ಕಳ್ಳತನಕ್ಕೆ ಪೂರ್ವಯೋಜಿತವಾಗಿ ಸುಶ್ಮಿತಾ ಸಂಚು ರೂಪಿಸಿ ಸಿದ್ದಳಾಗಿದ್ದಳು. ಕೃತ್ಯಕ್ಕೆ ಎಸಗುವ ಹಿಂದಿನ ದಿನವೇ ಮನೆಯೊಡರಿಗೆ ಮರುದಿನ ತಾನು ಕೆಲಸಕ್ಕೆ ಬರುವುದಿಲ್ಲವೆಂದು ಆಕೆ ಹೇಳಿದ್ದಳು. ಅಲ್ಲದೆ ನಗರದಲ್ಲಿ ಕಾರು ಬಾಡಿಗೆ ಓಡಿಸುತ್ತಿದ್ದ ತಮ್ಮೂರಿನ ಚಾಲಕನಿಗೆ ಪುರಿ ಜಗನ್ನಾಥ ದರ್ಶನಕ್ಕೆ ಹೋಗಲು ಸುಶ್ಮಿತಾ ದಂಪತಿ ಬುಕ್ ಮಾಡಿದ್ದರು.
ಅಂತೆಯೇ ಜ.27 ಮನೆಯಲ್ಲಿ ಚಿನ್ನಾಭರಣ ಕಾಣದೆ ಹೋದಾಗ ಕೂಡಲೇ ಪೊಲೀಸರಿಗೆ ದೂರು ನೀಡಿದ್ದ ವಿಫುಲ್, ಈ ಕೃತ್ಯದಲ್ಲಿ ಮನೆ ಕೆಲಸದಾಳು ಸುಶ್ಮಿತಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಆಕೆಯ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿತ್ತು. ಹೀಗಾಗಿ ಆಕೆ ಮೇಲೆ ಶಂಕೆ ಹೆಚ್ಚಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮೊಬೈಲ್ ಕರೆಗಳ ವಿವರ ಪಡೆದಾಗ ಒಂದು ನಂಬರ್‌ಗೆ ನಿರಂತರ ಕರೆ ಹೋಗಿದ್ದವು. ಆ ಮೊಬೈಲ್ ನಂಬರ್ ಬೆನ್ನಹತ್ತಿದ್ದಾಗ ಹೊಸಕೋಟೆ ಬಳಿ ಸುಶ್ಮಿತಾ ಕುಟುಂಬ ಸಿಕ್ಕಿಬಿದ್ದಿದೆ.