ರಾಗಿ ತುಂಬುತ್ತಿದ್ದ ಮಹಿಳೆ ತಾಳಿ ಕದ್ದ ಮೂವರ ಬಂಧನ : 120 ಗ್ರಾಂ ಚಿನ್ನದ ಸರ ಜಪ್ತಿ

| Published : Dec 29 2024, 01:18 AM IST / Updated: Dec 29 2024, 04:16 AM IST

chain snatcher

ಸಾರಾಂಶ

ಮನೆಯ ಆವರಣದಲ್ಲಿ ರಾಗಿ ತುಂಬುತ್ತಿದ್ದ ಮಹಿಳೆಗೆ ಚಾಕುವಿನಿಂದ ಬೆದರಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಮನೆಯ ಆವರಣದಲ್ಲಿ ರಾಗಿ ತುಂಬುತ್ತಿದ್ದ ಮಹಿಳೆಗೆ ಚಾಕುವಿನಿಂದ ಬೆದರಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೈವಾರ ಸಮೀಪದ ನಾರಾಯಣಹಳ್ಳಿಯ ಬಾಲಾಜಿ (30) ಬಂಧಿತ. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಸರ್ಕಾರಿ ಬಾಲಮಂದಿರಕ್ಕೆ ಬಿಡಲಾಗಿದೆ. ಆರೋಪಿಗಳಿಂದ 9.50 ಲಕ್ಷ ರು. ಮೌಲ್ಯದ 120 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ತರಬನಹಳ್ಳಿಯಲ್ಲಿ ಮಹಿಳೆಯೊಬ್ಬರು ಡಿ.15ರಂದು ಮಧ್ಯಾಹ್ನ ಮನೆಯ ಕಾಂಪೌಂಡ್‌ ಒಳಗೆ ಚೀಲಕ್ಕೆ ರಾಗಿ ತುಂಬುತ್ತಿದ್ದರು. ಈ ವೇಳೆ ಮೂವರು ಅಪರಿಚಿತರು ಮನೆ ಬಳಿಗೆ ಬಂದಿದ್ದು, ಈ ಪೈಕಿ ಇಬ್ಬರು ಕಾಂಪೌಂಡ್‌ ಪ್ರವೇಶಿಸಿದ್ದಾರೆ. ಈ ವೇಳೆ ಮಹಿಳೆ ನೀವು ಯಾರೆಂದು ಪ್ರಶ್ನಿಸಿದ್ದಾರೆ. ತಕ್ಷಣ ಇಬ್ಬರು ಆ ಮಹಿಳೆಯನ್ನು ಹಿಡಿದು ಮನೆಯೊಳಗೆ ಎಳೆದೊಯ್ದು ಚಾಕು ತೋರಿಸಿ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಾಜಿಗೆ ನ್ಯಾಯಾಂಗ ಬಂಧನ:

ಬಂಧಿತ ಆರೋಪಿಗಳ ಪೈಕಿ ಬಾಲಾಜಿ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈತ ತನ್ನ ಸಂಬಂಧಿಕರಾದ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಜತೆಯಲ್ಲಿ ಸೇರಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿ ಬಾಲಾಜಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.