ಸಾರಾಂಶ
ಸಬ್ ಇನ್ಸ್‌ಪೆಕ್ಟರೊಬ್ಬರು ಮೂವರು ವಿದ್ಯಾರ್ಥಿನಿಯರಿಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದು, ಅವರಿಂದ ಹಣ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿ ಮೈಸೂರಿನ ಬುಡಕಟ್ಟು ಅಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಮಹಿಳಾ ಆಯೋಗ ಹಾಗೂ ಮೈಸೂರು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪೊಲೀಸ್ ಸಬ್ ಇನ್ಸ್‌ಪೆಕ್ಟರೊಬ್ಬರು ಮೂವರು ವಿದ್ಯಾರ್ಥಿನಿಯರಿಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದು, ಅವರಿಂದ ಹಣ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿ ಮೈಸೂರಿನ ಬುಡಕಟ್ಟು ಅಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಮಹಿಳಾ ಆಯೋಗ ಹಾಗೂ ಮೈಸೂರು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಚಾಮರಾಜನಗರ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುವ ಬಿ.ಎಚ್. ಜಗದೀಶ್ ಮೂವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ವಿಡಿಯೋ, ಸಂದೇಶಗಳನ್ನು ಪೋಸ್ಟ್ ಮಾಡುವ ಜೊತೆಗೆ ಅವರಿಗೆ ಲೈಂಗಿಕ, ಮಾನಸಿಕ ಹಿಂಸೆಯನ್ನು ನೀಡಿದ್ದು. ಈತ ನೀಡಿರುವ ಕಿರುಕುಳದಿಂದ ಬೇಸತ್ತು ಮೂವರು ಒಂದೇ ಕಾಲೇಜಿನ ವಿದ್ಯಾರ್ಥಿನಿಯರು ಐಜಿ ಹಾಗೂ ಮಹಿಳಾ ಆಯೋಗಕ್ಕೆ ಬುಡಕಟ್ಟು ಅಭಿವೃದ್ಧಿ ಸಂಘದ ಸಹಕಾರದೊಂದಿಗೆ ದೂರು ನೀಡಿದ್ದಾರೆ.
ಘಟನೆ ವಿವರ: ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂವರು ವಿದ್ಯಾರ್ಥಿನಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಪಿಎಸ್‌ಐ ಜಗದೀಶ್ ಅವರನ್ನು ನಂಬಿಸಿ, ಮೊಬೈಲ್ ನಲ್ಲಿ ಚಾಟ್ ಮಾಡಿ, ಮದುವೆ ಆಗುವುದಾಗಿ ನಂಬಿಸಿ, ತಾನು ಪಿಎಸ್‌ಐ ಆಗಿದ್ದು, ಸರ್ಕಾರಿ ಕೆಲಸದಲ್ಲಿದ್ದೇನೆ ಎಂದು ಬುಟ್ಟಿಗೆ ಹಾಕಿಕೊಂಡಿದ್ದೇನೆ.
ಬಳಿಕ ತಾನು ಸಂಕಷ್ಟದಲ್ಲಿದ್ದು ಮನೆ ಕಟ್ಟುತ್ತಿದ್ದೇನೆ ನನಗೆ ಸಹಾಯ ಮಾಡಿ ಎಂದು ಅವರಲ್ಲಿ ಹಣ ಪಡೆದುಕೊಂಡಿದ್ದು, ತನ್ನ ಖಾತೆಗೆ ಹಣ ಹಾಕಿಕೊಂಡಿದ್ದೇನೆ. ಕೆಲವು ದಿನಗಳ ನಂತರ ಅವರು ಹಣ ವಾಪಸ್ ಕೇಳುತ್ತಿದ್ದಂತೆ ತನ್ನ ವರಸೆಯನ್ನು ಬದಲಾಯಿಸಿಕೊಂಡು.
ನೀವು ಲೈಂಗಿಕವಾಗಿ ನನ್ನ ಜೊತೆಗೆ ಸೇರಬೇಕು ಎಂದು ಬೆದರಿಕೆ ಹಾಕಿದ್ದಾನೆ. ಇಲ್ಲದಿದ್ದರೆ ನೀವು ಕಳುಹಿಸಿರುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ನಾನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ರಾಜಕಾರಣಿಗಳ ಸಪೋರ್ಟ್ ಇದೆ. ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿ ಅವರಿಗೆ ಮಾನಸಿಕವಾಗಿ ನೋವೊಂಟು ಮಾಡಿದ್ದಾನೆ.
ಈ ಬಗ್ಗೆ ಮೂವರು ಯುವತಿಯರು ಒಂದಾಗಿ ಮೈಸೂರು ಬುಡಕಟ್ಟು ಸೋಲಿಗರ ಅಭಿವೃದ್ದಿ ಸಂಘದ ಮೊರೆ ಹೋಗಿದ್ದಾರೆ. ಅವರು ಧೈರ್ಯ ತುಂಬಿ ಈತನ ವಿರುದ್ಧ ಐಜಿ ಹಾಗೂ ಮಹಿಳಾ ಆಯೋಗಕ್ಕೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ.
ಈತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಯುವತಿಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಸಿ. ಗೀರೀಶ್, ಆದಿವಾಸಿ ಮೂಲಭೂತ ಅಭಿವೃದ್ಧಿ ಸಂಘದ ಅಧ್ಯಕ್ಷೆ ಜೆ.ಬಿ. ಬೋಜಮ್ಮ, ಬುಡಕಟ್ಟು ಇರುಳಿಗ ಸಂಘದ ಅಧ್ಯಕ್ಷ ಮಹದೇವಯ್ಯ, ಆದಿವಾಸಿ ಯುವಕರ ಸಂಘದ ಅಧ್ಯಕ್ಷ ಅಭಿಷೇಕ್, ಸಮಾಜ ಸೇವಕ ಬಾಬು ಅವರು ಮಹಿಳಾ ಆಯೋಗ, ಹಾಗೂ ಐಜಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.