ಹೆತ್ತ ತಾಯಿಯಿಂದಲೇ ಮಗುವಿಗೆ ಚಿತ್ರಹಿಂಸೆ

| Published : Mar 04 2024, 01:15 AM IST / Updated: Mar 04 2024, 10:24 AM IST

child harassment

ಸಾರಾಂಶ

ಮಗುವನ್ನು ಮನೆಯಲ್ಲಿ ಕೂಡಿಹಾಕಿ ತಾಯಿಯೇ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆತ್ತ ತಾಯಿಯೇ ತನ್ನ ಮೂರೂವರೆ ವರ್ಷದ ಗಂಡು ಮಗುವನ್ನು ಮನಬಂದಂತೆ ಹಲ್ಲೆ ನಡೆಸಿ ಮನೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿ ಬಂದಿದೆ.

ಹೊಸಕೆರೆಹಳ್ಳಿ ಸಮೀಪದ ವೀರಭದ್ರನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಂಡನಿಂದ ಪ್ರತ್ಯೇಕವಾಗಿರುವ ಶಾರೀನ್‌ ಎಂಬ ಮಹಿಳೆ ವಿರುದ್ಧ ಈ ಆರೋಪ ಕೇಳಿ ಬಂದಿದೆ. 

ಸದ್ಯ ಹಲ್ಲೆಗೆ ಒಳಗಾದ ಮಗುವನ್ನು ಸ್ಥಳೀಯರು ರಕ್ಷಿಸಿ ಗಿರಿನಗರ ಠಾಣೆ ಪೊಲೀಸರ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಒಪ್ಪಿಸಿದ್ದಾರೆ.

ಪ್ರಕರಣದ ವಿವರ: ಮಹಾಲಕ್ಷ್ಮಿಲೇಔಟ್‌ ಮೂಲದ ಶಾರೀನ್‌ ಕೌಟುಂಬಿಕ ಕಲಹದಿಂದ ಪತಿಯಿಂದ ಪ್ರತ್ಯೇಕವಾಗಿದ್ದು, ತನ್ನ ಮೂರೂವರೆ ವರ್ಷದ ಮಗುವಿನ ಜತೆಗೆ ವೀರಭದ್ರನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾಳೆ. 

ವೃತ್ತಿಯಲ್ಲಿ ಫ್ಯಾಶನ್‌ ಡಿಸೈನರ್‌ ಎನ್ನಲಾದ ಶಾರೀನ್‌ ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಮಗುವನ್ನು ಮನೆಯ ಒಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಹೋಗುತ್ತಿದ್ದರು. ಸಂಜೆ ಮನೆಗೆ ಬರುತ್ತಿದ್ದಳು ಎನ್ನಲಾಗಿದೆ.

ಫೆ.19ರಂದು ಆ ಮಗು ಮನೆಯ ಕಿಟಕಿ ಬಳಿ ನಿಂತು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಗುವಿನ ಬಳಿ ತೆರಳಿ ಮಾತನಾಡಿಸಿದ್ದಾರೆ. ಮಗುವಿನ ಮೈ ತುಂಬಾ ಕಚ್ಚಿದ, ಗೀರಿದ ಬಾಸುಂಡೆಯಂತಹ ಗಾಯಗಳು ಕಂಡು ಬಂದಿವೆ. 

ಮರ್ಮಾಂಗದಲ್ಲೂ ಗಾಯಗಳಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಮಗುವನ್ನು ಪ್ರಶ್ನೆ ಮಾಡಿದಾಗ ಅಮ್ಮ ಮತ್ತು ಅಂಕಲ್‌ ಹೊಡೆದರು ಎಂದು ಆ ಮಗು ಹೇಳಿದೆ. 

ಶಾರೀನ್‌ಗೆ ಬಾಯ್‌ ಫ್ರೆಂಡ್‌ ಇದ್ದು, ಇಬ್ಬರೂ ಆ ಮಗುವಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಬಳಿಕ ಆ ಮಗುವಿನ ಸ್ಥಿತಿ ಕಂಡು ಬೇಸರಗೊಂಡ ಸ್ಥಳೀಯರು ತಿನ್ನಲು ಊಟ, ಕುಡಿಯಲು ನೀರು ಕೊಟ್ಟು ಆರೈಕೆ ಮಾಡಿದ್ದಾರೆ.

ತಾಯಿಗೆ ತರಾಟೆ: ಮಗುವಿಗೆ ಚಿತ್ರ ಹಿಂಸೆ ನೀಡುವ ವಿಚಾರ ತಿಳಿದು ಸ್ಥಳೀಯ ಸಂಘಟನೆ ಹಾಗೂ ನೆರೆಹೊರೆಯ ನಿವಾಸಿಗಳು ಮಗುವಿನ ತಾಯಿಗೆ ತರಾಟೆ ತೆಗೆದುಕೊಂಡಿದ್ದಾರೆ. 

ಬಳಿಕ ಆ ಮಗುವನ್ನು ಗೃಹಬಂಧನದಿಂದ ಮುಕ್ತಿಗೊಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ರಾಜೇಶ್ವರಿ ಎಂಬುವವರು ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ. 

ಈ ದೂರಿನ ಮೇರೆಗೆ ಪೊಲೀಸರು ಆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಈ ಸಮಿತಿ ನೀಡುವ ವರದಿ ಆಧರಿಸಿ ಮಗುವಿನ ತಾಯಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಹೌದು ಹೊಡೆದಿದ್ದೇನೆ: ತಾಯಿ

ಹೌದು, ನನ್ನ ಮಗುವಿಗೆ ನಾನು ಹೊಡೆದಿದ್ದೇನೆ. ತಂದೆಯ ರೀತಿ ಕೆಟ್ಟ ಬುದ್ಧಿ ಕಲಿಯದಿರಲಿ ಎಂದು ಹೊಡೆದು ಬುದ್ಧಿ ಹೇಳಿದ್ದೇನೆ. ಕುಕ್ಕರ್‌ನಿಂದ ಮಗುವಿಗೆ ಹಲ್ಲೆ ಮಾಡಿಲ್ಲ. ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದೆ. ಅದಕ್ಕೂ ಚಿಕಿತ್ಸೆ ಕೊಡಿಸುತ್ತಿದ್ದೇನೆ. 

ನನಗೆ ಆರು ತಿಂಗಳಿಂದ ಕೆಲಸ ಇರಲಿಲ್ಲ. ಈಗ ಕೆಲಸ ಸಿಕ್ಕಿದೆ. ನನಗೆ ಯಾರು ಇಲ್ಲ. ಹೀಗಾಗಿ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಸಂಜೆ ಬೇಗ ಬಂದು ನೋಡಿಕೊಳ್ಳುತ್ತಿದ್ದೆ ಎಂದು ಮಗುವಿನ ತಾಯಿ ಶಾರೀನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾಳೆ.

ಸಚಿವೆ ಸೂಚನೆ: ತಾಯಿ ಮೇಲೆ ಕೇಸ್‌ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗನಿಗೆ ಅಮಾನುಷವಾಗಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹಲ್ಲೆಗೈದ ಶಾರಿನ್ ಮತ್ತು ಆಕೆಯ ಪ್ರಿಯಕರನ ವಿರುದ್ಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಹಲ್ಲೆಗೀಡಾದ ಮೂರುವರೆ ವರ್ಷದ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಹತ್ತಿರದ ಡಾ। ಎಂ.ಎಚ್.ಮರೀಗೌಡ ರಸ್ತೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಆರ್. ನಾಗರತ್ನ ಹಾಗೂ ರಾಜೇಶ್ವರಿ ಅವರು ನೀಡಿದ ದೂರಿನ್ವಯ ಗಿರಿನಗರ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮಗುವಿಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ; ಬೀಗ ಹಾಕಿ ಹೋಗುತ್ತಿದ್ದಳು. 

ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸಿದ್ದರು. 

ಆದರೆ, ತಾಯಿ ಶಾರಿನ್ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ.ಘಟನೆ ಕುರಿತಂತೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೊಂದು ಅಮಾನುಷ ಕೃತ್ಯವಾಗಿದೆ. 

ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಇಲಾಖಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಆದೇಶದ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಲಾಗಿದೆ.