ಮಳವಳ್ಳಿ ತಾಲೂಕಿನ ಮಿಕ್ಕೆರೆಯಲ್ಲಿ ಬಸ್-ಬೈಕ್ ಡಿಕ್ಕಿ: ದುರ್ಘಟನೆಯಲ್ಲಿ ಸವಾರ ಸಾವು

| Published : Sep 03 2024, 01:35 AM IST / Updated: Sep 03 2024, 04:19 AM IST

ಸಾರಾಂಶ

ಮಳವಳ್ಳಿ ತಾಲೂಕಿನ ಮಿಕ್ಕೆರೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುನೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

 ಮಳವಳ್ಳಿ : ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ದೋರನಹಳ್ಳಿಯ ಸ್ವಾಮಿ ಅವರ ಪುತ್ರ ಮುನೇಶ (26) ಸ್ಥಳದಲ್ಲಿಯೇ ಮೃತಪಟ್ಟವರು. ಹಿಂಬದಿ ಸವಾರ ಬೆಂಗಳೂರು ಮೂಲದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ತಮ್ಮ ಸ್ವಗ್ರಾಮದಿಂದ ಬೈಕ್‌ನಲ್ಲಿ ಸ್ನೇಹಿತನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಿರುಗಾವಲು ಕಡೆಯಿಂದ ಮಂಡ್ಯದ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುನೇಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಬೆಂಗಳೂರು ಮೂಲದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.