ಸಾರಾಂಶ
ಬೆಂಗಳೂರು : ಮನೆಗಳವು, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳವು ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ, ₹20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕೆ.ಆರ್.ಪುರದ ಆಟೋ ಚಾಲಕ ಇಮ್ರಾನ್ ಅಲಿಯಾಸ್ ಕ್ರೀಡ್(31) ಮತ್ತು ದಯಾನಂದನಗರದ ಕೊಳಗೇರಿ ನಿವಾಸಿ ಸೈಯದ್ ಇಮ್ತಿಯಾಜ್ ಅಲಿಯಾಸ್ ಚಾಕು(28) ಬಂಧಿತರು. ಆರೋಪಿಗಳಿಂದ ಸುಮಾರು ₹20 ಲಕ್ಷ ಮೌಲ್ಯದ 173 ಗ್ರಾಂ ಚಿನ್ನಾಭರಣ, 570 ಗ್ರಾಂ ಬೆಳ್ಳಿ ವಸ್ತುಗಳು, ಐದು ಮೊಬೈಲ್‌ಗಳು ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದುಷ್ಕರ್ಮಿಗಳು ಹಾಡಹಗಲೇ ಮನೆಯೊಂದರ ಬೀಗ ಮುರಿದು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಈ ಹಿಂದೆ ನಗರದ ವಿವಿಧೆಡೆ ಮೊಬೈಲ್, ಮನೆ, ದ್ವಿಚಕ್ರ ವಾಹನ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇವರ ಬಂಧನದಿಂದ ಸಿದ್ದಾಪುರ, ಕಬ್ಬನ್ ಪಾರ್ಕ್, ಹಲಸೂರು ಗೇಟ್, ಆಡುಗೋಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 10 ಅಪರಾಧ ಪ್ರಕರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.