ಕೇಂದ್ರ ಸರ್ಕಾರದಿಂದ ಗುರುತು ದೃಢೀಕರಣಕ್ಕೆ ಬಂದಿದೆ ಹೊಸ ಆಧಾರ್‌ ಮೊಬೈಲ್‌ ಆ್ಯಪ್‌

| N/A | Published : Apr 09 2025, 12:31 AM IST / Updated: Apr 09 2025, 04:56 AM IST

mobile top up

ಸಾರಾಂಶ

 ಕೇಂದ್ರ ಸರ್ಕಾರವು ಹೊಸ ಆಧಾರ್ ಆ್ಯಪ್‌ ಅನ್ನು ಮಂಗಳವಾರ ಹೊರತಂದಿದ್ದು, ಬಳಕೆದಾರರು ಭೌತಿಕ ಕಾರ್ಡ್‌ ಅಥವಾ ನಕಲು ಪ್ರತಿ ಅಗತ್ಯವಿಲ್ಲದೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

 ನವದೆಹಲಿ: ಕೇಂದ್ರ ಸರ್ಕಾರವು ಹೊಸ ಆಧಾರ್ ಆ್ಯಪ್‌ ಅನ್ನು ಮಂಗಳವಾರ ಹೊರತಂದಿದ್ದು, ಬಳಕೆದಾರರು ಭೌತಿಕ ಕಾರ್ಡ್‌ ಅಥವಾ ನಕಲು ಪ್ರತಿ ಅಗತ್ಯವಿಲ್ಲದೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಈ ಆ್ಯಪ್‌ನ ಪರೀಕ್ಷಾ ಆವೃತ್ತಿ ಈಗ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಆ್ಯಪ್‌ ಅಧಿಕೃತವಾಗಿ ವಿಡುಗಡೆ ಆಗಲಿದೆ. ಇದರಲ್ಲಿ ಬಳಕೆದಾರರ ಗೌಪ್ಯತೆ ರಕ್ಷಣೆ ಆಗಲಿದೆ ಎಂದು ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ.ಬಳಕೆ ಹೇಗೆ?:

ಅಂಗಡಿ, ಹೋಟೆಲ್‌, ಪ್ರಯಾಣ ಚೆಕ್‌ಪೋಸ್ಟ್‌ ಅಥವಾ ಇತರೆಡೆ ಆಧಾರ್‌ ದೃಢೀಕೃತ ಗುರುತು ಬೇಕಿದ್ದರೆ ಅಲ್ಲಿನ ಸಿಬ್ಬಂದಿ ಯುಪಿಐ ರೀತಿಯ ಕ್ಯುಆರ್‌ ಕೋಡ್‌ ಇಟ್ಟುಕೊಂಡಿರುತ್ತಾರೆ. ಆ ಕ್ಯುಆರ್‌ ಕೋಡ್‌ ಅನ್ನು ಹೊಸ ಆಧಾರ್‌ ಆ್ಯಪ್‌ ಮೂಲಕ ಸ್ಕ್ಯಾನ್‌ ಮಾಡಿದರೆ ನಮ್ಮ ವಿವರ ಅವರಿಗೆ ಲಭಿಸುತ್ತದೆ. ಇದು ಸ್ಕ್ಯಾನ್ ಮಾಡಿದ ಅಥವಾ ಮುದ್ರಿತ ಆಧಾರ್ ಪ್ರತಿಗಳ ಅಗತ್ಯ ನಿವಾರಿಸುತ್ತದೆ. ಅಲ್ಲದೆ, ಆಧಾರ್ ಮಾಹಿತಿಯ ನಕಲಿ ಗುರುತನ್ನು ತಡೆಯುತ್ತದೆ.

16ಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳ ಇನ್‌ಸ್ಟಾ ಬಳಕೆಗೆ ನಿರ್ಬಂಧ

ಲಂಡನ್‌: ಖ್ಯಾತ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅದರ ಸ್ವಚ್ಛಂದ ಬಳಕೆ ಮೇಲೆ ನಿರ್ಬಂಧ ಹೇರಿದೆ. ಮೊದಲಿಗೆ ಈ ಕ್ರಮವು ಅಮೆರಿಕ, ಬ್ರಿಟನ್‌, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಜಾರಿಗೆ ಬರಲಿದ್ದು, ಮುಂಬರುವ ತಿಂಗಳುಗಳಲ್ಲಿ ಭಾರತ ಸೇರಿ ಇತರೆಡೆ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಪೋಷಕರ ನಿಯಂತ್ರಣ (ಪೇರೆಂಟಲ್‌ ಕಂಟ್ರೋಲ್‌) ಅನ್ನು ಜಾರಿಗೆ ತಂದಿದ್ದು, 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಇನ್ನು ಲೈವ್‌ ಸ್ಟ್ರೀಂ ನೋಡಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಜೊತೆಗೆ ಅಶ್ಲೀಲ ಚಿತ್ರಗಳನ್ನು ಅನ್‌ಬ್ಲರ್‌ ಮಾಡಲು ಪೋಷಕರ ಅನುಮತಿ ಕಡ್ಡಾಯವಾಗಿರಲಿದೆ ಎಂದು ಇನ್‌ಸ್ಟಾ  ಸಂಸ್ಥೆ ಮೆಟಾ ತಿಳಿಸಿದೆ.

ಗೋಧ್ರಾ ರೈಲಿಗೆ ಬೆಂಕಿ: 3 ಬಾಲಾಪರಾಧಿಗಳಿಗೆ 3 ವರ್ಷ ರಿಮ್ಯಾಂಡ್‌ ಹೋಂ ಸಜೆ

ಗೋಧ್ರಾ: ಗುಜರಾತ್‌ನಲ್ಲಿ 2002ರಲ್ಲಿ ಸಂಭವಿಸಿದ್ದ ಗೋಧ್ರಾ ರೈಲು ದಹನ ಘಟನೆಯ 23 ವರ್ಷಗಳ ನಂತರ, ಪಂಚಮಹಲ್ ಜಿಲ್ಲೆಯ ಬಾಲ ನ್ಯಾಯಮಂಡಳಿ ಮೂವರು ವ್ಯಕ್ತಿಗಳಿಗೆ 3 ವರ್ಷಗಳ ಕಾಲ ರಿಮ್ಯಾಂಡ್ ಹೋಂ ವಾಸದ ಶಿಕ್ಷೆ ವಿಧಿಸಿದೆ.ಘಟನೆ ಸಂಭವಿಸಿದಾಗ ಇವರು ಬಾಲಕರಾಗಿದ್ದರು. ಹೀಗಾಗಿ ಬಾಲ ನ್ಯಾಯಮಂಡಳಿ ಅಧ್ಯಕ್ಷ ಕೆ.ಎಸ್. ಮೋದಿ ಅವರು ಈ ಮೂವರನ್ನೂ 3 ವರ್ಷಗಳ ಕಾಲ ಗೃಹಬಂಧನಕ್ಕೆ ಕಳುಹಿಸಿದರು ಮತ್ತು ತಲಾ 10,000 ರು. ದಂಡ ವಿಧಿಸಿದರು.

2022ರ ಫೆ.27ರಂದು ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ 59 ಕರಸೇವಕರು ಅಸುನೀಗಿದ್ದರು.

ಬಂಗಾಳ ಹೆಚ್ಚುವರಿ ಶಿಕ್ಷಕರ ನೇಮಕ: ಸಿಬಿಐ ತನಿಖೆ ರದ್ದತಿಗೆ ಸುಪ್ರೀಂ ಆದೇಶ

ಪಿಟಿಐ ನವದೆಹಲಿಇತ್ತೀಚೆಗೆ ನೇಮಕಾತಿ ಅಕ್ರಮದ ಕಾರಣ ನೀಡಿ ಪ.ಬಂಗಾಳದ 25 ಸಾವಿರ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿದ್ದ ಸುಪ್ರೀಂ ಕೋರ್ಟ್‌, ಮಂಗಳವಾರ ಮಮತಾ ಬ್ಯಾನರ್ಜಿ ಸರ್ಕಾರ ಕೊಂಚ ನಿರಾಳ ಆಗುವಂಥ ತೀರ್ಪು ಪ್ರಕಟಿಸಿದೆ. ವಜಾ ಆಗಿದ್ದ 25 ಸಾವಿರ ಶಿಕ್ಷಕರಿಗೆ ಮತ್ತೆ ನೌಕರಿ ನೀಡುವ ಉದ್ದೇಶದಿಂದ ಹೆಚ್ಚುವರಿ ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸುವ ದೀದಿ ಸರ್ಕಾರದ ನಿರ್ಧಾರದ ಸಿಬಿಐ ಆರಂಭಿಸಿದ್ದ ತನಿಖೆಯನ್ನು ಕೋರ್ಟ್ ರದ್ದುಗೊಳಿಸಿದೆ.

ಇತ್ತೀಚೆಗೆ ಈ ಹೆಚ್ಚುವರಿ ಹುದ್ದೆ ಸೃಷ್ಟಿಸುವ ಮಮತಾ ಸಚಿವ ಸಂಪುಟದ ನಿರ್ಣಯದ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಮತಾ ಸುಪ್ರೀಂ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್ ಖನ್ನಾ ನೇತೃತ್ವದ ಪೀಠ, ‘ನ್ಯಾಯಾಲಯಗಳು ಸಂಪುಟ ನಿರ್ಧಾರಗಳನ್ನು ತನಿಖೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಮತ್ತು ಆದೇಶವು ತಪ್ಪಾಗಿದೆ’ ಎಂದಿತು.ಈ ಹೆಚ್ಚುವರಿ ಹುದ್ದೆಗಳು ತಾತ್ಕಾಲಿಕವಾಗಿದ್ದು, ಕಾಯಂ ನೌಕರಿ ಸಿಗುವವರೆಗೆ ವಜಾ ಆದವರಿಗೆ ನೀಡಲು ಉದ್ದೇಶಿಸಲಾಗಿತ್ತು.